×
Ad

ನಗರಾಭಿವೃದ್ಧಿಯಲ್ಲಿ ಎರಡೇ ವರ್ಷಗಳಲ್ಲಿ ಅಪಾರ ಸಾಧನೆ: ವೆಂಕಯ್ಯ ನಾಯ್ಡು

Update: 2016-09-02 10:57 IST

ಚೆನ್ನೈ, ಸೆ.2: ದೇಶದ ನಗರಪ್ರದೇಶಗಳು ಮೂಲ ಸೌಕರ್ಯಗಳ ತೀವ್ರ ಕೊರತೆಯಿಂದ ಬಳಲುತ್ತಿರುವ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಹಾಗೂ ಬಡತನ ನಿವಾರಣೆ ಸಚಿವ ಎಂ. ವೆಂಕಯ್ಯ ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳ ಅಭಿವೃದ್ಧಿಯ ಕಾರ್ಯಸೂಚಿಯ ಬಗ್ಗೆ ಹಿಂದಿನ ಸರಕಾರಗಳು ಹಲವು ದಶಕಗಳಿಂದ ತೋರಿಸಿದ್ದ ನಿರ್ಲಕ್ಷಕ್ಕೆ ಮೋದಿ ಸರಕಾರ ಅಂತ್ಯ ಹಾಡಿದೆಯೆಂದು ಅವರು ಹೇಳಿದ್ದಾರೆ.

ಚೆನ್ನೈನಲ್ಲಿ ಗುರುವಾರ ಪ್ರಾದೇಶಿಕ ಪತ್ರಿಕಾ ಸಂಪಾದಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ‘‘ಮೋದಿ ಸರಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ದೇಶದ ಆರ್ಥಿಕತೆ ಹಳಿತಪ್ಪಿತ್ತು ಹಾಗೂ ನಗರ ಪ್ರದೇಶಗಳಲ್ಲಿ ಜನರ ಜೀವನಮಟ್ಟ ಹಾಗೂ ಆರ್ಥಿಕ ಚಟುವಟಿಕೆಗಳು ಕುಸಿದಿದ್ದವು. ಇಂತಹ ಸನ್ನಿವೇಶದಲ್ಲಿ ನಾಗರಿಕರು, ರಾಜ್ಯ ಸರಕಾರಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಗರಗಳಿಗೆ ಹೊಸ ಸ್ವರೂವನ್ನು ನೀಡುವಂತೆ ಮೋದಿ ತಮಗೆ ಕರೆ ನೀಡಿದ್ದರು’’ ಎಂದು ನಾಯ್ಡು ತಿಳಿಸಿದರು.
    
ಮೋದಿ ಸರಕಾರ ಅಧಿಕಾರಕ್ಕೇರಿದ ಎರಡೇ ವರ್ಷಗಳಲ್ಲಿ ನರ್ಮ್ ಯೋಜನೆಯಡಿ ಹಿಂದಿನ ಸರಕಾರಗಳು ಹತ್ತು ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಮಾಡಿ ತೋರಿಸಿದೆಯೆಂದು ನಾಯ್ಡು ವಿವರಿಸಿದರು. ನರ್ಮ್ ಯೋಜನೆಯಡಿ ನಗರ ಮೂಲ ಸೌಕರ್ಯಗಳ ಸುಧಾರಣೆಗೆ ಕಳೆದ 10 ವರ್ಷಗಳಲ್ಲಿ ಹಿಂದಿನ ಸರಕಾರಗಳು ಕೇವಲ 33,902 ಕೋಟಿ ರೂ. ನೆರವು ನೀಡಿದ್ದರೆ, ಮೋದಿ ಸರಕಾರವು ಎರಡೇ ವರ್ಷಗಳಲ್ಲಿ 1,13,143 ಕೋಟಿ ರೂ. ನೆರವು ಘೋಷಿಸಿದ್ದು, ಶೇ.333ರಷ್ಟು ಏರಿಕೆ ಮಾಡಿದೆಯೆಂದು ಅವರು ಹೇಳಿದರು. 2004-14ನೇ ಸಾಲಿನಲ್ಲಿ ನಗರಪ್ರದೇಶಗಳ ಬಡವರಿಗೆ 13.70 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, ಕಳೆದ ಒಂದು ವರ್ಷದಲ್ಲಿ 9 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದು ಕಳೆದ 10 ವರ್ಷಗಳಲ್ಲಿ ನೀಡಲಾದ ಅನುಮೋದನೆಯ ಶೇ.66ರಷ್ಟು ಅಧಿಕವೆಂದರು.

ನೂತನ ನಗರ ಮಿಶನ್ ಯೋಜನೆಯಡಿ, ಕೇಂದ್ರವು ರಾಜ್ಯಗಳಿಗೆ ಒಟ್ಟು 53,747 ಕೋಟಿ ರೂ. ನೆರವನ್ನು ನೀಡಿದೆ. ನಗರ ಪ್ರದೇಶಗಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ 2015-16ನೆ ಸಾಲಿನಲ್ಲಿ 87 ಸಾವಿರ ಕೋಟಿ ರೂ. ನೀಡಲಾಗಿದ್ದರೆ, ಅದಕ್ಕಿಂತಲೂ ಹಿಂದಿನ ಐದು ವರ್ಷಗಳಲ್ಲಿ ಅವುಗಳಿಗೆ ದೊರೆತಿರುವ ಒಟ್ಟು ಅನುದಾನದ ಮೊತ್ತವು ಕೇವಲ 23 ಸಾವಿರ ಕೋಟಿ ರೂ.ಗಳೆಂದು ವೆಂಕಯ್ಯ ನಾಯ್ಡು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News