ಅಂತೂ ಇಂತೂ ಜಾಕಿ ಚಾನ್ ಗೆ ಆಸ್ಕರ್ ಬಂತು !
ಲಾಸ್ ಏಂಜಲಿಸ್, ಸೆ. 2: ಹಾಲಿವುಡ್‌ನ ಸಾಹಸ ಚಿತ್ರಗಳ ತಾರೆ ಜಾಕೀ ಚಾನ್‌ರಿಗೆ ಅಮೆರಿಕ ಫಿಲ್ಮ್ ಅಕಾಡೆಮಿಯು ಗೌರವ ಆಸ್ಕರ್ ಪ್ರಶಸ್ತಿ ನೀಡಿದೆ.
ಚಿತ್ರರಂಗದಲ್ಲಿ ಮಾಡಿದ ‘‘ಅಸಾಧಾರಣ ಸಾಧನೆ’’ಗಾಗಿ ಚೀನಿ ನಟನಿಗೆ ಈ ಪ್ರಶಸ್ತಿ ನೀಡಲಾಗಿದೆ.
ಹಾಂಕಾಂಗ್ ಮತ್ತು ಹಾಲಿವುಡ್‌ಗಳಲ್ಲಿ ತಯಾರಾದ ಡಝನ್‌ಗಟ್ಟಳೆ ಚಿತ್ರಗಳಲ್ಲಿ ಚಾನ್ ನಟಿಸಿದ್ದಾರೆ.
ಯುಎಸ್ ಫಿಲ್ಮ್ ಅಕಾಡೆಮಿಯು ಸಂಕಲನಕಾರಿಣಿ (ಎಡಿಟರ್) ಆ್ಯನ್ ಕೋಟ್ಸ್, ಸಾಕ್ಷಚಿತ್ರ ನಿರ್ಮಾಪಕ ಫ್ರೆಡರಿಕ್ ವೈಸ್‌ಮನ್ ಮತ್ತು ಪಾತ್ರ ಹಂಚಿಕೆದಾರ (ಕಾಸ್ಟಿಂಗ್ ಡೈರೆಕ್ಟರ್) ಲಿನ್ ಸ್ಟಾಲ್‌ಮಾಸ್ಟರ್‌ರಿಗೂ ಗೌರವ ಆಸ್ಕರ್ ಪ್ರಶಸ್ತಿಗಳನ್ನು ನೀಡಿದೆ.
ಪ್ರಶಸ್ತಿ ವಿಜೇತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ‘‘ನೈಜ ಮುಂಚೂಣಿಗರು ಹಾಗೂ ದಂತಕತೆಗಳು’’ ಎಂಬುದಾಗಿ ಅಕಾಡೆಮಿ ಅಧ್ಯಕ್ಷ ಚೆರಿಲ್ ಬೂನ್ ಐಸಾಕ್ಸ್ ಬಣ್ಣಿಸಿದ್ದಾರೆ.
ಆಸ್ಕರ್ ಪ್ರಶಸ್ತಿಯೊಂದನ್ನು ಗೆಲ್ಲುವುದು ತನ್ನ ಕನಸು ಎಂಬುದಾಗಿ ಚಾನ್ ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ.
‘ರಶ್ ಅವರ್’ ಮತ್ತು ‘ಕಂಗ್‌ಫೂ ಫಂಡ’ ಸರಣಿ ಚಿತ್ರಗಳ ಮೂಲಕ 62 ವರ್ಷದ ಜಾಕಿ ಚಾನ್ ಅಂತಾರಾಷ್ಟ್ರೀಯ ತಾರೆಯಾದರು.
ತನ್ನ ಎಂಟನೆ ವರ್ಷದಲ್ಲೇ ಚಿತ್ರರಂಗದಲ್ಲಿ ಖಾತೆ ಆರಂಭಿಸಿದ ಅವರು, ಈವರೆಗೆ 30ಕ್ಕೂ ಅಧಿಕ ಮಾರ್ಶಲ್ ಆರ್ಟ್ಸ್ ಚಿತ್ರಗಳಿಗೆ ಕತೆ ಬರೆದಿದ್ದಾರೆ, ನಿರ್ದೇಶಿಸಿದ್ದಾರೆ ಮತ್ತು ನಟಿಸಿದ್ದಾರೆ.
ಅವರು ಈ ವರ್ಷ ಜಗತ್ತಿನ ಎರಡನೆ ಅತಿ ಹೆಚ್ಚು ಸಂಭಾವನೆ ಪಡೆದ ನಟನಾಗಿದ್ದಾರೆ. ಮೊದಲ ಸ್ಥಾನದಲ್ಲಿರುವವರು ಡ್ವಾಯ್ನಾ ‘ದ ರಾಕ್’ ಜಾನ್ಸನ್.
ಚಾನ್ ಇನ್ನು ಬಾಂಡ್ ನಿರ್ದೇಶಕ ಮಾರ್ಟಿನ್ ಕ್ಯಾಂಬೆಲ್‌ರ ಚಿತ್ರ ‘ದ ಫಾರೀನರ್’ನಲ್ಲಿ ಮಾಜಿ 007 ನಟ ಪಿಯರ್ಸ್ ಬ್ರಾನ್ಸನ್ ಜೊತೆ ನಟಿಸಲಿದ್ದಾರೆ.