ದಲಿತರ ಅಭಿವೃದ್ಧಿಗೆ ನನ್ನ ಗಮನ:ಪ್ರಧಾನಿ ಮೋದಿ

Update: 2016-09-02 14:23 GMT

ಹೊಸದಿಲ್ಲಿ,ಸೆ.2: ದಲಿತರ ಅಭಿವೃದ್ಧಿಗಾಗಿ ತಾನು ಸಂಪೂರ್ಣ ಗಮನ ಹರಿಸುತ್ತಿದ್ದೇನೆ ಎಂದು ಶುಕ್ರವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜದ ಕೆಲವು ‘ಸ್ವಘೋಷಿತ ರಕ್ಷಕರು’ ತನ್ನ ಸರಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

 ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸಿರುವ ಜನರು ಸಾಮಾಜಿಕ ಅಸಮತೋಲನದ ರಾಜಕೀಯದ ವಿರುದ್ಧದ ತನ್ನ ನಿಲುವನ್ನು ಇಷ್ಟಪಡುತ್ತಿಲ್ಲ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದರು.

ಹಲವಾರು ರಾಜ್ಯಗಳಲ್ಲಿ ಗೋಹತ್ಯೆ ಅಥವಾ ಗೋಮಾಂಸ ಸಾಗಾಣಿಕೆ ಶಂಕೆಯಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತು ತಲೆಯೆತ್ತಿರುವ ವಿವಾದದ ನಡುವೆಯೇ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.

ಈ ದೇಶಕ್ಕೆ ಜಾತಿ ಒಡಕಿನ ವಿಷವನ್ನುಣ್ಣಿಸಿರುವವರು ಈ ದೇಶವನ್ನು ನಾಶಗೊಳಿಸಿದ್ದಾರೆ ಎಂದ ಅವರು, ಭಾರತೀಯ ಸಮಾಜವು ಕೆಲ ಆಳವಾಗಿ ಬೇರೂರಿರುವ ಅಸಮಾನತೆಯನ್ನು ಒಳಗೊಂಡಿದೆ ಎಂದರು.

ತನ್ನ ಆಡಳಿತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಟೀಕೆಯ ಹಿನ್ನೆಲೆಯಲ್ಲಿ ಮೋದಿ, ತಾನು ದಲಿತರೊಂದಿಗಿರುವುದನ್ನು, ಗಿರಿಜನರಿಗಾಗಿ ತನ್ನನ್ನೇ ಅರ್ಪಿಸಿಕೊಂಡಿರುವುದನ್ನು ಕೆಲವು ಸ್ವಘೋಷಿತ ಸಮಾಜ ರಕ್ಷಕರು ಸಹಿಸುತ್ತಿಲ್ಲ, ಹೀಗಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಬಿಜೆಪಿಯು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಅಭಿವೃದ್ಧಿ ಅಜೆಂಡಾವನ್ನು ಮುಂದಿಟ್ಟುಕೊಂಡು ಹೋರಾಡಲಿದೆ ಎಂದು ಹೇಳಿದ ಅವರು, ಕಳೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವೋಟ್-ಬ್ಯಾಂಕ್ ರಾಜಕೀಯದ ವಾತಾವರಣವಿರಲಿಲ್ಲ, ಬದಲಿಗೆ ಅಭಿವೃದ್ಧಿ ಪರ ರಾಜಕೀಯದ ವಾತಾವರಣವಿತ್ತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News