ಪದ್ಮಾವತಿಗೆ ಶಾಹಿದ್ ಷರತ್ತು
ಬಾಜಿರಾವ್ ಮಸ್ತಾನಿ ಚಿತ್ರದ ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ಸಂಜಯ್ ಬನ್ಸಾಲಿ ನಿರ್ದೇಶನದ ನೂತನ ಚಿತ್ರ ‘ಪದ್ಮಾವತಿ’ಯ ಚಿತ್ರದ ಶೂಟಿಂಗ್ ಕಳೆದ ವಾರ ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಆರಂಭಗೊಂಡಿದೆ. ‘ಪದ್ಮಾವತಿ’ ಚಿತ್ರೀಕರಣಕ್ಕೆ ಮುನ್ನವೇ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಂತಹ ಚಿತ್ರ. ಐತಿಹಾಸಿಕ ಕಥಾವಸ್ತುವನ್ನು ಹೊಂದಿರುವ ಈ ಚಿತ್ರಕ್ಕೆ ನಾಯಕರಾಗಿ ಹಲವು ಸೂಪರ್‌ಸ್ಟಾರ್‌ಗಳ ಹೆಸರು ಕೇಳಿಬಂದಿದ್ದರೂ ಅಂತಿಮವಾಗಿ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಆಯ್ಕೆಯಾಗಿದ್ದಾರೆ. ಈಗ ತಾನೇ ಹೆಣ್ಣು ಮಗುವಿನ ತಂದೆಯಾಗಿರುವ ಸಂಭ್ರಮದಲ್ಲಿರುವ ಶಾಹಿದ್, ಶೂಟಿಂಗ್‌ಗೆ ತೆರಳಲು ಸಿದ್ಧರಾಗುತ್ತಿದ್ದಾರೆ.
ಆದಾಗ್ಯೂ ಈ ಚಿತ್ರದಲ್ಲಿ ರಣವೀರ್‌ಸಿಂಗ್‌ನ ಪಾತ್ರಕ್ಕಿರುವಷ್ಟು ಸ್ಕೋಪ್ ತನ್ನ ಪಾತ್ರಕ್ಕಿಲ್ಲವೆಂದು ಶಾಹಿದ್‌ಗೆ ಗೊತ್ತಿದೆ. ಆದರೆ ಬನ್ಸಾಲಿ ಚಿತ್ರವಾದ್ದರಿಂದ, ‘ಪದ್ಮಾವತಿ’ಯನ್ನು ತಿರಸ್ಕರಿಸಲು ಶಾಹಿದ್‌ಗೆ ಮನಸ್ಸಿಲ್ಲ. ಆದಾಗ್ಯೂ, ಅವರು ಬನ್ಸಾಲಿಗೆ ಒಂದು ಕಂಡೀಶನ್ ಹಾಕಿದ್ದಾರೆ. ಚಿತ್ರದಲ್ಲಿ ರಣವೀರ್ ಪಾತ್ರಕ್ಕೆ ಇರುವಷ್ಟು ಪ್ರಾಧಾನ್ಯತೆ ತನಗೂ ಸಿಗುವಂತೆ ಚಿತ್ರಕಥೆಯಲ್ಲಿ ಬದಲಾವಣೆ ಮಾಡಬೇಕೆಂಬ ಷರತ್ತನ್ನು ಶಾಹಿದ್ ಮುಂದಿಟ್ಟಿದ್ದಾರಂತೆ. ಬಾಲಿವುಡ್‌ನಲ್ಲಿ ತನ್ನದೇ ಆದ ಇಮೇಜನ್ನು ಹೊಂದಿರುವ ಶಾಹಿದ್‌ನ ಬೇಡಿಕೆಯಲ್ಲಿ ನ್ಯಾಯವಿದೆಯೆಂಬುದನ್ನು ಮನಗಂಡ ಬನ್ಸಾಲಿ, ಅದಕ್ಕಾಗಿ ಮೂರು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಈ ಸಮಯದೊಳಗೆ ಅವರು ರಣವೀರ್‌ಸಿಂಗ್ ಹಾಗೂ ದೀಪಿಕಾ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ. ರಾಜಸ್ಥಾನದ ಚಿತ್ತೂರಿನ ರಾಣಿ ಪದ್ಮಾವತಿ ಹಾಗೂ ಆಕೆಯ ಪ್ರೀತಿಗಾಗಿ ಹಾತೊರೆಯುವ ದಿಲ್ಲಿಯ ಚಕ್ರವರ್ತಿ ಅಲಾವುದ್ದೀನ್ ಖಿಲ್ಜಿಯ ಕುರಿತಾದ ಕಥಾವಸ್ತುವನ್ನು ಈ ಚಿತ್ರವು ಹೊಂದಿದೆ.ರಣವೀರ್‌ಸಿಂಗ್ ಖಿಲ್ಜಿಯಾಗಿ, ದೀಪಿಕಾ ಪದ್ಮಾವತಿಯಾಗಿ ಹಾಗೂ ಆಕೆಯ ಪತಿಯಾಗಿ ರಾಜಾ ರಾವಲ್‌ನ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ.