ಗೋಧಿ ಬಣ್ಣ... ದಾಖಲೆ

Update: 2016-09-08 07:28 GMT

ಸ್ಯಾಂಡಲ್‌ವುಡ್‌ನಲ್ಲಿ ಸರಣಿ ಚಿತ್ರಗಳ ಬಿಡುಗಡೆಯ ನಡುವೆಯೂ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಅತ್ತ ಅಮೆರಿಕದಲ್ಲೂ ಬಿಡುಗಡೆ ಕಂಡಿರುವ ಚಿತ್ರಕ್ಕೆ ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ನಡುವೆ ನಿರ್ಮಾಪಕ ಪುಷ್ಕರ್ ಸಂತಸ ಪಡಲು ಇನ್ನೊಂದು ಕಾರಣವೂ ಇದೆ. ಗೋ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ಪ್ರದರ್ಶನದ ಹಕ್ಕುಗಳು ಬರೋಬ್ಬರಿ 1.5 ಕೋಟಿ ರೂ.ಗೆ ಮಾರಾಟವಾಗಿವೆ. ಪ್ರಸ್ತುತ ಬಿಗ್‌ಸ್ಟಾರ್‌ಗಳ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳು ಕೂಡಾ ತೀರಾ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವಾಗ, ಗೋಧಿ ಬಣ್ಣ...ಕ್ಕೆ ಇಷ್ಟು ದೊಡ್ಡ ದರ ದೊರೆತಿರುವುದು ಸ್ಯಾಂಡಲ್‌ವುಡ್ ಮಂದಿಗೆ ಅಚ್ಚರಿ ತಂದಿದೆ.

ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆಯ ಮೊತ್ತವೇ ಸರಿ. ಗೋಧಿ ಬಣ್ಣ... ಚಿತ್ರದ ಗೆಲುವು ಇಡೀ ಕನ್ನಡ ಸಿನೆಮಾರಂಗಕ್ಕೆ ಒಂದು ಶುಭ ಸುದ್ದಿಯಾಗಿದೆ. ಸದಭಿರುಚಿಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಕೈಬಿಡಲಾರರು ಎಂಬುದಕ್ಕೆ ಈ ಚಿತ್ರ ಒಂದು ನಿದರ್ಶನ ಎಂದವರು ಟ್ವೀಟ್ ಮಾಡಿದ್ದಾರೆ. ಅನಂತನಾಗ್, ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರ ಇಡೀ ಭಾರತೀಯ ಚಿತ್ರರಂಗದ ಗಮನವನ್ನೂ ಸೆಳೆದಿದೆ. ಈ ನಡುವೆ ಖ್ಯಾತ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರಾಜ್ ಈ ಚಿತ್ರವನ್ನು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಮೇಕ್ ಮಾಡಲು ಮುಂದೆ ಬಂದಿದ್ದಾರೆ. ಹಾಗಂತ ಅವರೇ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ತಾನು ಬೇರೆ ಭಾಷೆಯ ಉತ್ತಮ ಚಿತ್ರಗಳನ್ನು ಕನ್ನಡಕ್ಕೆ ತಂದಿದ್ದೇನೆ.

ಅದೇ ರೀತಿಯ ಇಲ್ಲಿನ ಉತ್ತಮ ಚಿತ್ರಗಳನ್ನೂ ಬೇರೆ ಭಾಷೆಗೆ ಕೊಂಡೊಯ್ಯುತ್ತಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿಕೊಂಡಿದ್ದಾರೆ. ಆದರೆ ಆ ಬಗ್ಗೆ ಹೆಚ್ಚಿನ ವಿವರಗಳನ್ನೇನೂ ಅವರು ನೀಡಿಲ್ಲ. ಒಂದು ಮೂಲಗಳ ಪ್ರಕಾರ ಈ ಎರಡೂ ರಿಮೇಕ್ ಚಿತ್ರಗಳಲ್ಲಿ ನಟಿಸುವ ಜೊತೆಗೆ ನಿರ್ದೇಶನದ ಹೊಣೆಯನ್ನೂ ಅವರು ಹೊತ್ತುಕೊಳ್ಳುವ ಸಾಧ್ಯತೆಯಿದೆ. ಪ್ರಕಾಶ್ ರಾಜ್ ಈ ಮೊದಲು ಮಲಯಾಳಂನ ಸಾಲ್ಟ್ ಆ್ಯಂಡ್ ಪೆಪ್ಪರ್ ಚಿತ್ರವನ್ನು ಕನ್ನಡದಲ್ಲಿ ಒಗ್ಗರಣೆ ಹೆಸರಿನಲ್ಲಿ ರಿಮೇಕ್ ಮಾಡಿದ್ದಾರೆ.ಅದಕ್ಕೂ ಮುನ್ನ ತಮಿಳಿನ ‘ಅಭಿಯುಂ ನಾನುಂ’ ಚಿತ್ರದ ಕನ್ನಡ ರಿಮೇಕ್ ‘ನಾನು, ನನ್ನ ಕನಸು’ನಿರ್ದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News