×
Ad

ದ್ವೇಷ ಭಾಷಣ: ಶಾಸಕನ ವಿರುದ್ಧ ಕೇಸು ದಾಖಲು

Update: 2016-09-04 12:07 IST

ನಾದಾಪುರಂ,ಸೆಪ್ಟಂಬರ್ 4: ಯೂತ್‌ಲೀಗ್ ಕಾರ್ಯಕರ್ತ ಅಸ್ಲಂ ಕೊಲೆಯ ಬೆನ್ನಿಗೆ ಶಾಸಕ ಪಾರಕ್ಕಲ್ ಅಬ್ದುಲ್ಲಾ ದುಬೈ ಕೆ.ಎಂ.ಸಿ.ಸಿಯ ಸಭೆಯಲ್ಲಿ ದ್ವೇಷದಿಂದ ಭಾಷಣ ಮಾಡಿದ್ದಾರೆಂದು ಆರೋಪಿಸಿ ನಾದಾಪುರಂ ಪೊಲೀಸರುಅವರ ವಿರುದ್ಧ ಕೇಸು ದಾಖಲಿಸಿದ್ದಾರೆಂದು ವರದಿಯಾಗಿದೆ. ಡಿವೈಎಫ್‌ಐ ಬ್ಲಾಕ್ ಅಧ್ಯಕ್ಷ ಟಿ. ಅಬೀಷ್ ಗ್ರಾಮೀಣ ಎಸ್ಪಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾದಾಪುರಂ ಫಸ್ಟ್‌ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಅನುಮತಿಯೊಂದಿಗೆ ಪೊಲೀಸರು ಕೇಸು ದಾಖಲಿಸಿದ್ದು ಅಬ್ದುಲ್ಲಾ ವಿರುದ್ಧ ಐಪಿಸಿ ಸೆಕ್ಷನ್ 505(1)ಬಿ ಪ್ರಕಾರ ಸಾರ್ವಜನಿಕರನ್ನು ಪ್ರಚೋದಿಸಿ ಭಾಷಣ ಮಾಡಿದ್ದಾರೆ ಎಂದು ಆರೋಪ ಹೊರಿಸಿ ಕೇಸುದಾಖಲಾಗಿದೆ. ಸಿಪಿಐಎಂ ನಾದಾಪುರಂ ವಲಯ ಕಾರ್ಯದರ್ಶಿ ಪಿಪಿ ಚಾತ್ತುರ ವಿರುದ್ಧವೂ ಈ ಹಿಂದೆ ಇದೇ ಸೆಕ್ಷನ್ ಅಡಿಯಲ್ಲಿ ಯೂತ್ ಲೀಗ್ ನಾಯಕರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇಸುದಾಖಲಿಸಿದ್ದರು. ಶಿಬಿನ್ ಕೊಲೆಪ್ರಕರಣದ ಆರೋಪಿಗಳ ವಿರುದ್ಧ ಪಿಪಿಚಾತ್ತು ಪ್ರಚೋದನಾಕಾರಿಯಾಗಿ ಭಾಷಣಮಾಡಿದ್ದಾರೆಂದು ಅವರ ವಿರುದ್ಧ ಕೇಸು ದಾಖಲಿಸಲಾಗಿತ್ತು.

ಇದು ಸಿಪಿಐಎಂ ಸಂಚು: ಪಾರಕ್ಕಲ್ ಅಬ್ದುಲ್ಲಾ:

ಕೋಝಿಕ್ಕೋಡ್, ದುಬೈ ಕೆಎಂಸಿಸಿ ಸಭೆಯಲ್ಲಿ ಮಾಡಿದ ಭಾಷಣದ ನೆಪದಲ್ಲಿ ತನ್ನ ವಿರುದ್ಧ ಪೊಲೀಸರು ಕೇಸು ದಾಖಲಿಸಿರುವುದು ಸಿಪಿಐಎಂನ ಸಂಚು ಆಗಿದೆ ಎಂದು ಶಾಸಕ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. ಕುಟ್ಯಾಡಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂಗಾದ ಸೋಲಿಗೆ ಸೇಡು ತೀರಿಸಲಿಕ್ಕಾಗಿ ತನ್ನ ವಿರುದ್ಧ ಕೇಸು ದಾಖಲಿಸಲಾಗಿದೆ. ತಾನು ಕಾನೂನಾತ್ಮಕವಾಗಿ ಪ್ರಕರಣವನ್ನು ಎದುರಿಸುವೆ ಎಂದು ಅವರು ಹೇಳಿದ್ದಾರೆ. ಅಸ್ಲಂ ಹಂತಕರನ್ನು ಕೊಲ್ಲಬೇಕೆಂದು ಕರೆ ನೀಡಿದ್ದೇನೆಂಬುದು ಆಧಾರ ರಹಿತ ಆರೋಪವಾಗಿದೆ. ಅಸ್ಲಂ ಕೊಲೆಯಾದ ನಂತರ ಎಸ್‌ಡಿಪಿಐ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಎತ್ತಿರುವ ಆರೋಪಗಳಿಗೆ ಉತ್ತರವಷ್ಟೇ ತನ್ನ ಭಾಷಣವಾಗಿದೆ. ಅಸ್ಲಂನ ಕೊಲೆಗಡುಕರನ್ನು ಕೊಲ್ಲುವೆವು ಎಂದು ಎಸ್‌ಡಿಪಿಐಯವರು ಪ್ರಚಾರ ನಡೆಸುತ್ತಿದ್ದಾರೆ. ಇವರೇ ಕೊಂದ ಲೀಗ್‌ಕಾರ್ಯಕರ್ತನ ಕುರಿತು ಯಾಕೆಮಾತಾಡುತ್ತಿಲ್ಲ ಎಂದು ಭಾಷಣದಲ್ಲಿ ಪ್ರಶ್ನಿಸಿದ್ದೆ. ಊರಲ್ಲಿಶಾಂತಿಯಿರಬೇಕೆಂಬ ಕಾರಣಕ್ಕಾಗಿ ಎಸ್‌ಡಿಪಿಐಕಾರ್ಯಕರ್ತನನ್ನುಕೊಂದಿಲ್ಲ ಎಂದು ತಾನು ಹೇಳಿದ್ದೆ. ಎಸ್‌ಡಿಪಿಐಗೆ ಹೇಳಿದಾಗ ಸಿಪಿಐಎಂಗೆ ಯಾಕೆ ನೋವಾಗುತ್ತಿದೆ ಎಂದು ಅಬ್ದುಲ್ಲ ಪ್ರಶ್ನಿಸಿದ್ದಾರೆ. ಯಾವ ಕಾನೂನು ಸಲಹೆಯ ಆಧಾರದಲ್ಲಿ ಕೇಸು ದಾಖಲಿಸಿದ್ದಾರೆಂದು ಗೊತ್ತಿಲ್ಲ. ಕೋರ್ಟು ನಿರ್ದೇಶ ಪ್ರಕಾರ ಕೇಸು ದಾಖಲಿಸಲಾಗಿದೆ ಎಂಬುದು ಪೊಲೀಸರ ಅಪಪ್ರಚಾರವಾಗಿದೆ. ಸಿಪಿಐಎಂನ ಗುಲಾಮರಂತೆ ನಾದಾಪುರಂ ಪೊಲೀಸರು ವರ್ತಿಸುತ್ತಿದ್ದಾರೆ. ಯಾವ ತನಿಖೆಗೂ ತಾನು ಸಿದ್ಧ ಎಂದು ಪಾರಕ್ಕಲ್ ಅಬ್ದುಲ್ಲಾ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಉಮರ್ ಪಾಂಡಿಶಾಲ, ಪ್ರಧಾನಕಾರ್ಯದರ್ಶಿ ಎನ್‌.ಸಿ. ಅಬೂಬಕರ್ ಮುಂತಾದವರು ಉಪಸ್ಥಿತರಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News