×
Ad

ಆಮ್ ಆದ್ಮಿ ಪಕ್ಷದ 12ನೆ ಶಾಸಕನ ಬಂಧನ

Update: 2016-09-04 23:38 IST

ಹೊಸದಿಲ್ಲಿ, ಸೆ.4: ದಿಲ್ಲಿ ರಾಜಕೀಯದಲ್ಲಿ ಮತ್ತೊಂದು ಆಘಾತಕಾರಿ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷದ 12ನೆ ಶಾಸಕ ಬಂಧನ ಕ್ಕೀಡಾಗಿದ್ದಾರೆ. ವಿವಾದಾತ್ಮಕ ಸೆಕ್ಸ್ ಸೀಡಿಯಲ್ಲಿ ಬಿಂಬಿಸಲಾಗಿರುವ ಮಹಿಳೆ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಂದೀಪ್ ಕುಮಾರ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ಬಂಧಿಸಲಾಗಿದೆ. ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಆಪ್‌ನ 11 ಮಂದಿ ಶಾಸಕರನ್ನು ಬಂಧಿಸಲಾಗಿದೆ.

ಮಹಿಳೆ ಶನಿವಾರ ಸುಲ್ತಾನ್‌ಪುರಿ ಠಾಣೆಗೆ ತೆರಳಿ ಶಾಸಕನ ವಿರುದ್ಧ ದೂರು ನೀಡಿದ್ದು, ರಾತ್ರಿ ವೇಳೆ ಕುಮಾರ್ ಅವರನ್ನು ಪೊಲೀಸರು ಬಂಧಿಸಿದರು. ಪಡಿತರ ಚೀಟಿ ಪಡೆಯಲು ಅಂದಿನ ಸಚಿವರಾಗಿದ್ದ ಸಂದೀಪ್ ಬಳಿ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಆಪಾದಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಅಮಲು ಪದಾರ್ಥ ಮಿಶ್ರಿತ ಪಾನೀಯ ನೀಡಿ, ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ. ಘಟನೆ 11 ತಿಂಗಳ ಹಿಂದೆ ನಡೆದಿದ್ದು, ವೀಡಿಯೊ ಚಿತ್ರೀಕರಣ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಹಸ್ಯ ಕ್ಯಾಮರಾದಿಂದ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶಾಸಕ ವಾಸವಿರುವ ಪ್ರದೇಶದಲ್ಲೇ ವಾಸವಿರುವ ಈ ವಿವಾಹಿತ ಮಹಿಳೆ, ಪ್ರತಿದಿನ ಮಾರುಕಟ್ಟೆಗೆ ಹೋಗುವಾಗ ಶಾಸಕರ ಮನೆ ಮುಂದೆಯೇ ಹಾದುಹೋಗುತ್ತಿದ್ದುದಾಗಿ ವಿವರಿಸಿದ್ದಾರೆ.
ಶಾಸಕನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 328 (ವಿಷಪ್ರಾಶನ), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ಎ (ಲೈಂಗಿಕ ದೃಶ್ಯಾವಳಿ ಹರಿದುಬಿಡುವುದು) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
‘ಶಾಸಕರು ಒಬ್ಬರೇ ಸಂಜೆ ವೇಳೆ ಮನೆಯಲ್ಲಿರುತ್ತಿದ್ದರು. ಒಂದು ದಿನ ನಾನು ಅವರನ್ನು ಭೇಟಿ ಮಾಡಿ, ಪಡಿತರ ಚೀಟಿ ಸಮಸ್ಯೆ ಬಗ್ಗೆ ಹೇಳಿಕೊಂಡಾಗ, ರೇಷನ್ ಕಾರ್ಡ್ ಮಾಡಿಸಿಕೊಡುವ ಭರವಸೆ ನೀಡಿದರು. ಇದಕ್ಕಾಗಿ ಕಚೇರಿಗೆ ತೆರಳುವಂತೆ ಸೂಚಿಸಿದರು. ಅವರು ಎ-4ನಲ್ಲಿ ಕಚೇರಿ ಹೊಂದಿದ್ದು ಅಲ್ಲಿಗೆ ಕರೆದರು. ಆ ಬಳಿಕ ಇವೆಲ್ಲವನ್ನೂ ಮಾಡಿದರು. ಅವರು ವೀಡಿಯೊ ಮಾಡಿದ್ದು ಗಮನಕ್ಕೆ ಬಂದಿಲ್ಲ ಎಂದು ಮಹಿಳೆ ಹೇಳಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News