ಹೊಲದಲ್ಲಿ ಕೆಲಸ ಮಾಡಲು ನಿರಾಕರಿಸಿದ ದಲಿತ ದಂಪತಿಗೆ ಹಲ್ಲೆ
ಲಕ್ನೋ, ಸೆ.4: ಹೊಲದಲ್ಲಿ ಕೂಲಿ ಕೆಲಸ ಮಾಡಲು ನಿರಾಕರಿಸಿದ ದಲಿತ ದಂಪತಿಯ ಮೇಲೆ ಭೂಮಾಲಕರು ಹಲ್ಲೆ ನಡೆಸಿದ ಘಟನೆ ಇಲ್ಲಿನ ಪಿಪಲ್ಹೆರಾ ಗ್ರಾಮದಲ್ಲಿ ನಡೆದಿದೆ.
ಕಬ್ಬಿನ ಹೊಲದಲ್ಲಿ ಕೆಲಸ ಮಾಡಲು ನಿರಾಕರಿಸಿದ ಇನಾಮ್ ಸಿಂಗ್ ಹಾಗೂ ಆತನ ಕುಟುಂಬದ ಮೂವರು ಶನಿವಾರ ರಾಜು ಹಾಗೂ ಪತ್ನಿ ಮಾಂತೇಶ ಅವರ ಮೇಲೆ ಹಲ್ಲೆ ನಡೆಸಿದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ಖಟೋಲಿ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದವರು ದಿಢೀರ್ ಧರಣಿ ನಡೆಸಿದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ಘಟನೆಯಲ್ಲಿ ರಾಜಬೀರ್ ಹಾಗೂ ವಿಪಿನ್ ಕುಮಾರ್ ಎಂಬ ಇಬ್ಬರು ದಲಿತರ ಮೇಲೆ ಬೇರೆ ಜಾತಿಯವರು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಶೇರ್‌ಪುರ ಗ್ರಾಮದಲ್ಲಿ ನಡೆದಿದೆ. ಇಲ್ಲೂ ದಲಿತರು ಪ್ರತಿಭಟನೆ ನಡೆಸಿದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೂರನೆ ಘಟನೆಯಲ್ಲಿ ಮಹಿಳೆಯೊಬ್ಬರ ಜೊತೆಗಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಲಿತ ಯುವಕ ಅಮರ್‌ಜೀತ್ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಫಲೋಡಾ ಗ್ರಾಮದಲ್ಲಿ ನಡೆದಿದೆ.