ಮಾವೋವಾದಿ ಗುಂಪುಗಳ ನಡುವೆ ಘರ್ಷಣೆ: ನಾಲ್ಕು ಮಂದಿ ಸಾವು
ರಾಂಚಿ,ಸೆ.4: ಜಾರ್ಖಂಡ್ ರಾಜ್ಯದ ಖುಟಿ ಜಿಲ್ಲೆಯ ಕಸೀರಾ ಎಂಬ ಗ್ರಾಮದಲ್ಲಿ ಎರಡು ಮಾವೋವಾದಿ ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿಯಿಂದ 70 ಕಿಲೋಮೀಟರ್ ದೂರದ ಈ ಹಳ್ಳಿಯಲ್ಲಿ ನಾಲ್ಕು ಮಂದಿಯ ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಗಾಯಗೊಳಿಸಿತು. ಬಳಿಕ ಹರಿತ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಮೂರು ಶವಗಳನ್ನು ಪತ್ತೆ ಮಾಡಿದ್ದು, ಇವರನ್ನು ಮುಖೇಶ್, ರಾಹುಲ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ನಾಲ್ಕನೆ ವ್ಯಕ್ತಿಯ ದೇಹಕ್ಕಾಗಿ ಶೋಧ ನಡೆಯುತ್ತಿದೆ. ಮೃತಪಟ್ಟ ಎಲ್ಲರೂ ಅಪರಾಧ ಹಿನ್ನೆಲೆಯವರಾಗಿದ್ದು, ಮಾವೋವಾದಿ ಸಂಘಟನೆಯ ಜಯಂತ ಸಾಹು ಬಣಕ್ಕೆ ಸೇರಿದವರು ಎಂದು ಪೊಲೀಸರು ವಿವರಿಸಿದ್ದಾರೆ.
ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‌ಎಫ್‌ಐ) ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ರಾಜ್ಯದ 24 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾವೋವಾದಿ ಗೆರಿಲ್ಲಾಗಳು ಸಕ್ರಿಯರಾಗಿದ್ದಾರೆ.