×
Ad

ಪಾಠ ಕಲಿಯದ ವಿವಾದಿತ ಬಿಜೆಪಿ ನಾಯಕ

Update: 2016-09-05 08:53 IST

ಆಗ್ರಾ,ಸೆ.5: ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಪಕ್ಷದ ಹುದ್ದೆ ಕಳೆದುಕೊಂಡ ಬಿಜೆಪಿ ಮುಖಂಡ ದಯಾಶಂಕರ್ ಈ ಘಟನೆಯಿಂದ ಪಾಠ ಕಲಿತಿಲ್ಲ. ಮತ್ತೆ ಬಿಎಸ್ಪಿ ನಾಯಕಿಯನ್ನು ನಾಯಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಾಯಾವತಿ ವಿರುದ್ಧ ಮಾಡಿರುವ ಆರೋಪಗಳನ್ನು ಪುನರುಚ್ಚರಿಸಿದ ಅವರು, "ಮಾಯಾವತಿ ಹಣದ ಹಿಂದೆ ಬಿದ್ದಿದ್ದಾರೆ" ಎಂದು ಲೇವಡಿ ಮಾಡಿದರು.
"ಆಕೆ ದುರಾಸೆಯ ಮಹಿಳೆ. ವೇಗವಾಗಿ ಓಡುತ್ತಿರುವ ಬೈಕನ್ನು ಅಟ್ಟಿಸಿಕೊಂಡು ಹೋಗುವ ನಾಯಿಯಂತೆ. ಬೈಕ್ ನಿಂತಾಗ ಅದು ನಿಲ್ಲುತ್ತದೆ" ಎಂದು ಹೇಳಿದರು. ಮಾಯಾವತಿ ಹಾಗೂ ಅವರ ನಿಕಟ ಸಂಬಂಧಿಕರಾದ ಸಹೋದರ ಆನಂದ್ ಕುಮಾರ್ ಹಾಗೂ ವಕೀಲ ಸತೀಶ್ ಮಿಶ್ರಾ ಕೋಟಿಗಟ್ಟಲೆ ಹಣ ಮಾಡಿದ್ದಾರೆ. ಮಾಯಾವತಿ ಕಪಟ ನಾಯಕಿ ಮತ್ತು ದನಗಾಹಿ ಎಂದು ನಿಂದಿಸಿದ್ದಾರೆ.
ಮಾಯಾವತಿ ಪಕ್ಷದ ಟಿಕೆಟ್‌ಗಳನ್ನು ಗರಿಷ್ಠ ಹಣ ನೀಡುವವರಿಗೆ ಮಾರಾಟ ಮಾಡುವ ವೇಶ್ಯೆ ಎಂದು ದಯಾಶಂಕರ್ ಕಳೆದ ಜುಲೈನಲ್ಲಿ ಟೀಕಿಸಿದ್ದರು. ಆದರೆ ಮಾಯಾವತಿಯನ್ನು ನಾಯಿಗೆ ಹೋಲಿಸಿರುವುದನ್ನು ಅಲ್ಲಗಳೆದಿದ್ದಾರೆ. ಅವರ ಮಾತನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರೂ, "ಮಾಯಾವತಿ ಹಾಗೂ ಅವರ ಪಕ್ಷದವರು ನಮ್ಮನ್ನು ನಾಯಿಗಳು ಎಂದು ಕರೆದಿದ್ದಾರೆ ಎಂದು ಹೇಳಿದ್ದಾಗಿ" ಸಮರ್ಥಿಸಿಕೊಂಡಿದ್ದಾರೆ. ಮೈನ್‌ಪುರಿಯಲ್ಲಿ ಜನಜಾಗೃತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News