ಹೊಸ ಆಯುಧವನ್ನು ತನ್ನ ಮೇಲೆಯೇ ಮೊದಲು ಪರೀಕ್ಷಿಸಿಕೊಂಡ ಡಿಜಿಪಿ ತಬ್ಬಿಬ್ಬು
ಲಕ್ನೋ, ಸೆ.5: ಹೊಸ ಆಯುಧವನ್ನು ತನ್ನ ಮೇಲೆಯೇ ಮೊದಲು ಪರೀಕ್ಷಿಸಿಕೊಂಡ ಉತ್ತರ ಪ್ರದೇಶ ಡಿಜಿಪಿ ತಬ್ಬಿಬ್ಬಾದ ಘಟನೆ ನಡೆದಿದೆ. ಬಳಿಕ ಸಹೋದ್ಯೋಗಿಗಳ ನೆರವಿನಿಂದ ಸಾವರಿಸಿಕೊಂಡರು.
ಹೊಸದಾಗಿ ಜಾರಿಗೆ ಬರಲಿರುವ ಟೀಸರ್ ಗನ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಡಿಜಿಪಿ ಜಾವೇದ್ ಅಹ್ಮದ್ ಮೊದಲು ತಮ್ಮ ಮೇಲೆಯೇ ಅದನ್ನು ಪ್ರಯೋಗ ಮಾಡಿದರು. ಟೀಸರ್ ಗನ್ ಎಷ್ಟು ಪರಿಣಾಮಕಾರಿ ಎಂದು ಪ್ರದರ್ಶಿಸುವ ಸಲುವಾಗಿ ಇದನ್ನು ಉತ್ಪಾದಿಸಿದ ಅಮೆರಿಕನ್ ಕಂಪೆನಿಯ ಭಾರತೀಯ ಘಟಕ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದ ವೇಳೆ ಈ ಘಟನೆ ನಡೆದಿದೆ. ದೂರು ಇಲ್ಲದೇ ಸಂಶಯದ ಮೇಲೆ ಬಂಧಿಸುವುದಕ್ಕೆ ಪ್ರತಿರೋಧ ತೋರುವ ವ್ಯಕ್ತಿಗಳ ಮೇಲೆ ಇದನ್ನು ಪ್ರಯೋಗಿಸಲು ಉದ್ದೇಶಿಸಲಾಗಿದೆ.
"ನಾನು ನಕ್ಷತ್ರಗಳನ್ನು ನೋಡಿದೆ" ಎಂದು ಈ ಘಟನೆ ಬಳಿಕ ಅಹ್ಮದ್ ಹಾಸ್ಯಚಟಾಕಿ ಹಾರಿಸಿದರು. ತಾವೇ ಸ್ವತಃ ಇದನ್ನು ಲೋಡ್ ಮಾಡಲು ಅವರು ಮುಂದಾಗಿದ್ದರು. ಇದನ್ನು ಕಾನೂನುಬದ್ಧವಾಗಿ ಬಳಸಬಹುದೇ ಎಂದು ಪರೀಕ್ಷಿಸಲು ಈ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಕೇಂದ್ರ ಗೃಹ ಸಚಿವಾಲಯ ಇಂಥ ಟೀಸರ್ ಗನ್ ಬಳಸಲು ಅನುಮತಿ ನೀಡಿದ ಬಳಿಕ ಭಯೋತ್ಪಾದನಾ ವಿರೋಧಿ ಘಟಕಕ್ಕೆ ಇಂಥ ಗನ್ ನೀಡಲು ಉದ್ದೇಶಿಸಲಾಗಿದೆ ಎಂದು ಅಹ್ಮದ್ ವಿವರಿಸಿದರು. ರಾಜ್ಯ ಹಾಗೂ ಕೇಂದ್ರದ ಒಪ್ಪಿಗೆ ಪಡೆದ ಬಳಿಕ ಖರೀದಿ ಆದೇಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಟೀಸರ್ ಗನ್‌ಗಳನ್ನು ಪ್ರಬಲ ವೈರ್‌ಗೆ ಸಂಪರ್ಕಿಸಲಾಗಿರುತ್ತದೆ. ಎಲೆಕ್ಟ್ರೋಡ್‌ಗಳು ವಿದ್ಯುತ್ತನ್ನು ಈ ಗನ್ ಮೂಲಕ ಪ್ರವಹಿಸಿ ಶಾಕ್ ನೀಡುತ್ತದೆ. ಕೆಲ ಸೆಕೆಂಡ್‌ಗಳ ಕಾಲ ಅವರು ತಬ್ಬಿಬ್ಬಾಗುವಂತೆ ಮಾಡುತ್ತದೆ.