ಇಸ್ಲಾಮಿಕ್ ಬ್ಯಾಂಕಿಂಗ್ ನತ್ತ ರಿಸರ್ವ್ ಬ್ಯಾಂಕ್ ಚಿತ್ತ

Update: 2016-09-06 07:47 GMT

ಹೊಸದಿಲ್ಲಿ, ಸೆ.6: ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ರಘುರಾಮ್ ರಾಜನ್ ಅವರು ಉರ್ಜಿತ್ ಪಟೇಲ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಕೆಲವೇ ದಿನಗಳ ಮೊದಲು ಬಿಡುಗಡೆಯಾದ ಆರ್ ಬಿ ಐ ವಾರ್ಷಿಕ ವರದಿಯಲ್ಲಿ ಬಡ್ಡಿ ರಹಿತ ಬ್ಯಾಂಕಿಂಗ್ ಜಾರಿಗೊಳಿಸುವ ಪ್ರಸ್ತಾಪ ಮಾಡಲಾಗಿದ್ದು, ಈ ಮೂಲಕ ಇಸ್ಲಾಮಿಕ್ ಬ್ಯಾಂಕಿಂಗ್ನ ಪ್ರಯೋಜನವನ್ನು ದೇಶದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಒದಗಿಸುವತ್ತ ಹೆಜ್ಜೆಯಿಟ್ಟಿದೆ.

ಕುತೂಹಲಕಾರಿ ವಿಚಾರವೆಂದರೆ ಈ ಹಿಂದೆ ಇದೇ ಆರ್ ಬಿ ಐ ಇಸ್ಲಾಮಿಕ್ ಫೈನಾನ್ಸ್ ಒದಗಿಸುವ ಕಾರ್ಯವನ್ನು ಬ್ಯಾಂಕೇತರ ವಿತ್ತ ಸಂಸ್ಥೆಗಳು ಅಥವಾ ಸಹಕಾರಿ ಸಂಸ್ಥೆಗಳು ಕೈಗೆತ್ತಿಕೊಳ್ಳಬಹುದು ಎಂದು ಹೇಳಿತ್ತು.

ಬಡ್ಡಿ ರಹಿತ ಬ್ಯಾಂಕಿಂಗ್ ಉತ್ಪನ್ನಗಳನ್ನು ಒದಗಿಸುವ ಕುರಿತು ಸರಕಾರದೊಡನೆ ಚರ್ಚಿಸಲಾಗುವುದು, ಎಂದು ಆರ್ ಬಿ ಐ ತನ್ನ ವಾರ್ಷಿಕ ವರದಿಯಲ್ಲಿ ಈಗ ಹೇಳಿದೆ.

ಆಡಳಿತ ಬಿಜೆಪಿಯಲ್ಲಿ ವಿರೋಧವಿರುವ ಕಾರಣದಿಂದಲೇ ಇಸ್ಲಾಮಿಕ್ ಬ್ಯಾಂಕಿಂಗ್ ಭಾರತದಲ್ಲಿ ನಿರೀಕ್ಷಿತ ಉತ್ತೇಜನ ಪಡೆಯದೇ ಇದೆ. ಸರಕಾರದ ಬಾಹ್ಯ ಸಾಲ ಸಂಸ್ಥೆ ಎಕ್ಸಿಮ್ ಬ್ಯಾಂಕ್ ಎಪ್ರಿಲ್ ತಿಂಗಳಲ್ಲಿ ತಾನು ಇಸ್ಲಾಮಿಕ್ ಡೆವಲಪ್ ಮೆಂಟ್ ಬ್ಯಾಂಕಿನ ಖಾಸಗಿ ರಂಗದ ಸಹ ಸಂಸ್ಥೆಗೆ 100 ಮಿಲಿಯನ್ ಡಾಲರ್ ಸಾಲ ನೀಡುವುದಾಗಿ ಹೇಳಿತ್ತು. ಭಾರತೀಯ ಉತ್ಪನ್ನಗಳು ಹಾಗೂ ಸೇವೆಗಳ ವಿದೇಶಿ ಖರೀದಿದಾರರಿಗೆ ಎಕ್ಸಿಮ್ ಬ್ಯಾಂಕ್ ನೀಡುವ ಸಾಲದಿಂದ ಪ್ರಯೋಜನವಾಗುವುದು. ಈ ನಿಟ್ಟಿನಲ್ಲಿ ಸೌದಿ ಮೂಲದ ಇಸ್ಲಾಮಿಕ್ ಕಾರ್ಪೊರೇಶನ್ ಫಾರ್ ದಿ ಡೆವಲೆಪ್ಮೆಂಟ್ ಆಫ್ ಪ್ರೈವೇಟ್ ಸೆಕ್ಟರ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News