ಭಾರತದ ಪ್ರತಿಯೊಬ್ಬ ಮಗು ಪ್ರಾಥಮಿಕ ಶಿಕ್ಷಣ ಪಡೆಯಲು ಇನ್ನು ಅರ್ಧ ಶತಮಾನವೇ ಬೇಕು !

Update: 2016-09-06 09:09 GMT

ಹೊಸದಿಲ್ಲಿ, ಸೆ.6: ಪ್ರಸಕ್ತ ಬೆಳವಣಿಗೆಗಳನ್ನು ಗಮನಿಸಿದಾಗ ಭಾರತದಲ್ಲಿ ಪ್ರತಿಯೊಬ್ಬ ಮಗು ಪ್ರಾಥಮಿಕ ಶಿಕ್ಷಣ ಪಡೆಯುವಂತಾಗಲು 2050ರ ತನಕ ಕಾಯಬೇಕಾಗಿದೆ. ಅಂತೆಯೇ ಮಾಧ್ಯಮಿಕ ಶಿಕ್ಷಣ ಭಾರತದಲ್ಲಿ ಎಲ್ಲರಿಗೂ 2060ರಲ್ಲಿ ಸಿಗಬಹುದಾದರೆ ಹಿರಿಯ ಮಾಧ್ಯಮಿಕ ಶಿಕ್ಷಣ ಎಲ್ಲರಿಗೂ 2085 ರ ಒಳಗಾಗಿ ಲಭ್ಯವಾಗಬಹುದು ಎಂದು ಯುನೆಸ್ಕೊ ‘ದ ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್’ ವರದಿ ತಿಳಿಸಿದೆ.

ಈ ವರದಿಯನ್ನು ಗಣನೆಗೆ ತೆಗೆದುಕೊಂಡಿದ್ದೇ ಆದಲ್ಲಿ ಭಾರತ ತನ್ನ ಸುಸ್ಥಿರ ಅಭಿವೃದ್ಧಿ ಮಾದರಿ ಸಾಧಿಸಲು 2030ರ ಗಡುವಿನ ಬದಲು ಇನ್ನರ್ಧ ಶತಮಾನ ಕಾಯಬೇಕಾದೀತು ಎಂದು ವರದಿಯಲ್ಲಿ ಹೇಳಲಾಗಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಎಲ್ಲರಿಗೂ ಪ್ರಾಥಮಿಕ ಶಿಕ್ಷಣ ಧ್ಯೇಯ 2051ರ ಒಳಗಾಗಿ ಈಡೇರುವುದಾದರೆ ಎಲ್ಲರಿಗೂ ಮಾಧ್ಯಮಿಕ ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣ ಕ್ರಮವಾಗಿ 2062 ಹಾಗೂ 2087ರ ಒಳಗಾಗಿ ಸಾಧ್ಯವಾಗುವುದು.

ಶಿಕ್ಷಣ ರಂಗದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆಯೆಂದು ಹೇಳಿರುವ ಯುನೆಸ್ಕೋ ವರದಿಯು ವಿಶ್ವದ ಬಡ ದೇಶಗಳ ಕೇವಲ ಶೇ.6 ರಷ್ಟು ವಯಸ್ಕರು ಹಾಗೂ ಭಾರತದಲ್ಲಿ ಶೇ.5 ರಷ್ಟು ವಯಸ್ಕರು ಯಾವತ್ತೂ ಸಾಕ್ಷರತೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ತಿಳಿಸಿದೆ. ಶಿಕ್ಷಣ ರಂಗದಲ್ಲಿನ ಅಸಮಾನತೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಹಾಗೂ ಈ ಬಗ್ಗೆ ಕುಟುಂಬಗಳಿಂದ ನೇರ ಮಾಹಿತಿ ಸಂಗ್ರಹಿಸಬೇಕೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News