ಬ್ಲಾಗ್ ಬರೆದದ್ದಕ್ಕೆ ನನ್ನನ್ನು ಗಲ್ಲಿಗೇರಿಸುತ್ತೀರಾ?: ಆಮ್ ಆದ್ಮಿವಕ್ತಾರ ಆಶುತೋಷ್ ಪ್ರಶ್ನೆ
ಹೊಸದಿಲ್ಲಿ,ಸೆ.6: ದಿಲ್ಲಿ ಸರಕಾರದ ಮಾಜಿ ಸಚಿವ ಸಂದೀಪ್ ಕುಮಾರ್‌ರ ರಕ್ಷಣೆಗಿಳಿದು ವಿವಾದಾತ್ಮಕ ಬ್ಲಾಗ್ ಬರೆದದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಸಮನ್ಸ್ ಜಾರಿಗೊಳಿಸಿರುವ ಬಗ್ಗೆ ಆಮ್‌ಆದ್ಮಿ ಪಾರ್ಟಿ ವಕ್ತಾರ ಆಶುತೋಷ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಭಾರತ ಫ್ಯಾಶಿಸ್ಟ್ ದೇಶವಾಗಿ ಬದಲಾಗಿದೆ. ಮತ್ತು ಒಂದು ಬ್ಲಾಗ್ ಬರೆದದ್ದಕ್ಕಾಗಿ ತನ್ನನ್ನು ಗಲ್ಲಿಗೇರಿಸಬೇಕೆ?" ಎಂದು ಅವರು ಪ್ರಶ್ನಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಆಶುತೋಷ್ ಸೆಪ್ಟಂಬರ್ ಎಂಟರಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ಆಯೋಗ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಸಮನ್ಸ್ ಕಳುಹಿಸಿದ್ದಾರೆ. ಇದನ್ನು ಟೀಕಿಸಿರುವ ಆಶುತೋಷ್ ಕುಮಾರಮಂಗಲಂ ಈಗಲೂ ಬಿಜೆಪಿಯ ಸಕ್ರಿಯೆ ಸದಸ್ಯರಾಗಿದ್ದಾರೆ ಎಂದು ಹೇಳಿದ್ದಾರೆ. ಸಹಮತದ ಸೆಕ್ಸ್‌ನ ಬಗ್ಗೆ ಬರೆಯುವ ಪ್ರತಿಯೊಬ್ಬ ಲೇಖಕನನ್ನು ರಾಷ್ಟ್ರೀಯ ಮಹಿಳಾ ಆಯೋಗ ಗುರಿಮಾಡುತ್ತಿದೆ ಎಂದು ಪತ್ರಕರ್ತನಿಂದ ರಾಜಕಾರಣಿಯಾಗಿ ಮಾರ್ಪಟ್ಟಿರುವ ಆಶುತೋಷ್ ಕಿಡಿಕಾರಿದ್ದಾರೆ.
"ಇಲ್ಲಿ ಯಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೇ? ಭಾರತ ಒಂದು ಫ್ಯಾಶಿಸ್ಟ್ ದೇಶವಾಗಿ ಬದಲಾಗಿದೆಯೇ? ತಾನೊಂದು ಕಾಲಂ ಬರೆದದ್ದಕ್ಕಾಗಿ ತನ್ನನ್ನು ಫಾಸಿಗೇರಿಸಬೇಕಾಗಿದೆಯೇ?" ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ದಿಲ್ಲಿ ಸರಕಾರದ ಮಾಜಿ ಸಚಿವ ಸಂದೀಪ್ ಕುಮಾರ್‌ರ ಸೆಕ್ಸ್ ಸಿಡಿ ಹಗರಣದಲ್ಲಿ ಅವರ ಬಚಾವ್‌ಗಿಳಿದು ಆಶುತೋಷ್ ವಿವಾದಾತ್ಮಕ ಬ್ಲಾಗ್ ಬರೆದಿದ್ದಕ್ಕಾಗಿ ಅವರು ಸೆಪ್ಟಂಬರ್ ಎಂಟರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.