×
Ad

ಝಾಕಿರ್ ನಾಯ್ಕ್ ಎನ್‌ಜಿಒಗೆ ಲೈಸೆನ್ಸ್ ನವೀಕರಣ ಮಾಡಿದ ಅಧಿಕಾರಿಯ ಪರ ನಿಂತ ಐಪಿಎಸ್ ಅಧಿಕಾರಿಗಳು

Update: 2016-09-07 08:35 IST

ಹೊಸದಿಲ್ಲಿ, ಸೆ.7:ಇಸ್ಲಾಂ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ ಸ್ವಯಂಸೇವಾ ಸಂಸ್ಥೆಯ ಲೈಸೆನ್ಸ್ ನವೀಕರಣ ಮಾಡಿದ ಅಧಿಕಾರಿಯನ್ನು ಅಮಾನತು ಮಾಡಿದ ಕೇಂದ್ರ ಸರಕಾರದ ವಿರುದ್ಧ ಇದೀಗ ಅವರ ಸಹೋದ್ಯೋಗಿಗಳೇ ತಿರುಗಿಬಿದ್ದಿದ್ದಾರೆ. ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಜಿ.ಕೆ.ದ್ವಿವೇದಿ ಅವರ ಅಮಾನತು ತಕ್ಷಣ ರದ್ದು ಮಾಡುವಂತೆ ಆಗ್ರಹಿಸಿ, ಗೃಹ ಸಚಿವಾಲಯದ 15 ಮಂದಿ ಜಂಟಿ ಕಾರ್ಯದರ್ಶಿಗಳು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ್ದಾರೆ.

ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ವಿದೇಶಿ ದೇಣಿಗೆ ಸ್ವೀಕರಿಸಲು ಲೈಸೆನ್ಸ್ ನವೀಕರಿಸಿದ ಹಿನ್ನೆಲೆಯಲ್ಲಿ ದ್ವಿವೇದಿ ಅವರನ್ನು ಅಮಾನತು ಮಾಡಲಾಗಿತ್ತು. ಈ ವಿಚಾರದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರು ತಕ್ಷಣ ಮಧ್ಯಪ್ರವೇಶಿಸಿ, ದ್ವಿವೇದಿ ಅವರ ಅಮಾನತು ರದ್ದುಪಡಿಸಬೇಕು ಎಂದು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ತಂಡ ಸಚಿವರನ್ನು ಆಗ್ರಹಿಸಿತು.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅನ್ವಯ ಐಆರ್‌ಎಫ್‌ಗೆ ಲೈಸೆನ್ಸ್ ನವೀಕರಿಸಿದ್ದರಲ್ಲಿ ದ್ವಿವೇದಿಯವರ ಕಿರಿಯ ಸಹೋದ್ಯೋಗಿಗಳ ಪಾತ್ರ ಮುಖ್ಯವಾಗಿದ್ದು, ಆನ್‌ಲೈನ್ ಕ್ಲಿಯರೆನ್ಸ್ ನೀಡಲು ಅವರಿಗೆ ಅಧಿಕಾರ ನೀಡಲಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ಇತ್ತೀಚಿನ ಭಯೋತ್ಪಾದಕ ಕೃತ್ಯ ಮತ್ತು ಧಾರ್ಮಿಕ ಸಂವಾದದ ಹಿನ್ನೆಲೆಯಲ್ಲಿ ಐಆರ್‌ಎಸ್ ಕಾರ್ಯಚಟುವಟಿಕೆಗಳ ಮೇಲೆ ಕೇಂದ್ರ ಸರಕಾರ ಹದ್ದಿನ ಕಣ್ಣು ಇರಿಸಿದೆ.

ದ್ವಿವೇದಿ ಈ ಲೈಸನ್ಸ್ ನವೀಕರಿಸುವ ವಿಚಾರದಲ್ಲಿ ಯಾವ ಪಾತ್ರವನ್ನೂ ವಹಿಸದಿದ್ದರೂ, ಅವರ ವಿರುದ್ಧ ಕ್ರಮ ಕೈಗೊಂಡಿರುವದು ಅನ್ಯಾಯ ಹಾಗೂ ಭೀತಿ ಹುಟ್ಟಿಸುವ ತಂತ್ರ. ಇದು ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ಹೊಣೆಯನ್ನು ನಿಭಾಯಿಸುವ ಇತರರ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ವಾದಿಸಿದ್ದಾರೆ.

ದ್ವಿವೇದಿ ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದ ಅಧಿಕಾರಿ. ಗೃಹಸಚಿವಾಲಯದ ವಿದೇಶಿ ವಿಭಾಗದಲ್ಲಿ ಹಲವು ಬದಲಾವಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಿಯೋಗದ ಸದಸ್ಯರು ವಿವರಿಸಿದ್ದಾರೆ. ಇದಕ್ಕೂ ಮುನ್ನ ನಿಯೋಗದ ಸದಸ್ಯರು ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಧಿಕಾರಿಗಳ ಅಹವಾಲು ಆಲಿಸಿದ ಕಾರ್ಯದರ್ಶಿ, ಈ ವಿಷಯದ ಬಗ್ಗೆ ಸರಕಾರಿ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಆ ಬಳಿಕ ದ್ವಿವೇದಿ ಪ್ರತ್ಯೇಕವಾಗಿ ಸಚಿವರನ್ನು ಭೇಟಿ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದರು. ಈ ಸಾಫ್ಟ್‌ವೇರ್ ಆಧರಿತ ವ್ಯವಸ್ಥೆಯಲ್ಲಿ ಕೆಂಪು ಪಟ್ಟಿಯ ಎನ್‌ಜಿಒಗಳನ್ನು ಪ್ರತ್ಯೇಕವಾಗಿ ತೋರಿಸಲು ಅವಕಾಶವಿಲ್ಲ. ಆದ್ದರಿಂದ ಲೈಸೆನ್ಸ್ ಆನ್‌ಲೈನ್ ನವೀಕರಣ ಮಾಡಲಾಗಿದೆ ಎಂದು ಅವರು ಸಮುಜಾಯಿಷಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News