ಕೈಮುಗಿದು ಎಲ್ಲರಲ್ಲಿ ಕ್ಷಮೆ ಕೋರಿದ ಆಮಿರ್ ಖಾನ್ !
ಮುಂಬೈ,ಸೆ.7: ಬಾಲಿವುಡ್ ನಟ ಆಮಿರ್ ಖಾನ್ ಇತರರಿಗಿಂತ ಭಿನ್ನರೆಂದು ಹೇಳಲಾಗುತ್ತದೆ. ಇತರ ನಟ, ನಿರ್ಮಾಪಕರು ಬಾಕ್ಸಾಫೀಸ್ ಸಂಖ್ಯೆಗಳು, ತಮ್ಮ ಖ್ಯಾತಿ, ಚಿತ್ರಗಳಿಗೆ ತಾವು ಹಾಕಿದ ಹಣದ ವಿಚಾರದ ಬಗ್ಗೆ ಮಾತನಾಡುತ್ತಾರಾದರೆ ಆಮಿರ್ ಮಾತ್ರ ತಮ್ಮ ಚಿತ್ರದ ಕಥಾವಸ್ತು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡಲು ಬಯಸುತ್ತಾರೆ, ಅವರೊಬ್ಬ ಭಾವಾತ್ಮಕ ವ್ಯಕ್ತಿಯೆಂಬುದೂ ತಿಳಿದ ವಿಚಾರ. ಬುಧವಾರ ಈ ನಟ ಕೈಮುಗಿದು ತನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ಅವರಿಂದ ಕ್ಷಮೆ ಕೋರಿದರು.
ಟ್ವಿಟ್ಟರ್ ಪೋಸ್ಟ್ ಒಂದರಲ್ಲಿ ಅವರು ಹೀಗೆ ಬರೆದಿದ್ದಾರೆ - ''ನಾನು ಯಾರಿಗಾದರೂ ಯಾವುದೇ ರೀತಿಯಲ್ಲೂ ನೋವುಂಟು ಮಾಡಿದ್ದರೆ, ನಿಮಗೆ ಕೈಮುಗಿದು ಕ್ಷಮೆ ಕೇಳುತ್ತೇನೆ, ಮಿಚ್ಚಮಿ ದುಕ್ಕದಮ್.'
ಅವರೇಕೆ ಹೀಗೆ ಬರೆದಿದ್ದಾರೆಂದು ತಲೆ ಕೆರೆದುಕೊಳ್ಳಬೇಡಿ. ಸೋಮವಾರ ಜೈನ್ ಹಬ್ಬ ಪರ್ಯುಶನ್ ಪರ್ವ ಆಚರಿಸಲಾಗಿತ್ತು. ಆ ದಿನ ಜೈನರು ಒಬ್ಬರಿಗೊಬ್ಬರು 'ಮಿಚ್ಚಮಿ ದುಕ್ಕದಮ್' ಎಂದು ಹೇಳಿ ಶುಭ ಹಾರೈಸುತ್ತಾರೆ ಹಾಗೂ ಇಡೀ ದಿನ ಉಪವಾಸ ಆಚರಿಸುತ್ತಾರೆ. ಪ್ರಾಕೃತ ಭಾಷೆಯಲ್ಲಿರುವ ಮಿಚ್ಚಮಿ ದುಕ್ಕದಮ್ ಎಂದರೆ 'ನಿಮಗೆ ನಾನು ಅರಿತೋ, ಅರಿಯದೆಯೋ ಮಾತು ಅಥವಾ ಕೃತಿಗಳ ಮುಖಾಂತರ ನೋವುಂಟು ಮಾಡಿದ್ದರೆ, ನಿಮ್ಮ ಕ್ಷಮೆ ಕೋರುತ್ತೇನೆ.''
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಕೂಡ 'ಮಿಚ್ಚಮಿ ದುಕ್ಕದಮ್' ಎಂದು ಬರೆದು ಪರ್ಯುಶನ್ ಪರ್ವದ ಸಂದರ್ಭ ಜೈನ ಬಾಂಧವರಿಗೆ ಶುಭ ಕೋರಿದ್ದರು. ಜೈನ ಮುನಿ ಬಗ್ಗೆ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಗೀತೆ ರಚನೆಕಾರ ವಿಶಾಲ್ ದದ್ಲಾನಿ ಕೂಡ 'ಮಿಚ್ಚಮಿ ದುಕ್ಕದಮ್' ಎಂದು ಬರೆದು ಕ್ಷಮೆ ಕೋರಿದ್ದರು.