ಆ್ಯಪಲ್ ಏರ್ ಪೋಡ್ ಹೆಡ್ ಫೋನ್ ನಿಂದ ಉಸಿರುಗಟ್ಟುವ ಅಪಾಯ?
ನ್ಯೂಯಾರ್ಕ್, ಸೆ.8: ಆ್ಯಪಲ್ ಬ್ರಾಂಡ್‌ನ ಐಫೋನ್ 7 ಹಾಗೂ 7 ಪ್ಲಸ್ ಬಿಡುಗಡೆಯಾಗುತ್ತಿದ್ದಂತೆಯೇ ಹೊಸ ಆ್ಯಪಲ್ ವೈರ್‌ಲೆಸ್ ಇಯರ್ ಫೋನುಗಳಲ್ಲಿರುವ ಮೈಕ್ರೋ ಸ್ಪೀಕರ್‌ಗಳಿಂದ ಉಸಿರುಗಟ್ಟುವ ಅಪಾಯವಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಬುಧವಾರ ಬಿಡುಗಡೆಯಾದ ಆ್ಯಪಲ್ ಏರ್ ಪೋಡ್‌ಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲಾಗಿದೆ ಹಾಗೂ ಸಂಗೀತ ಆಸ್ವಾದಿಸಲು, ಫೋನ್ ಕರೆಗಳನ್ನು ಮಾಡಲು, ಸಿನೆಮಾಗಳನ್ನು ವೀಕ್ಷಿಸಲು ಹಾಗೂ ಗೇಮ್ಸ್ ಪ್ರಿಯರಿಗೆ ಅದ್ಭುತ ಅನುಭವ ನೀಡಲಿದೆ ಎಂದು ಕಂಪೆನಿ ವರ್ಣಿಸಿದೆ. ಈ ವೈರ್‌ಲೆಸ್ ಏರ್ ಪೋಡ್‌ಗಳು ವೈರ್‌ಲೆಸ್ ಹೆಡ್ ಫೋನುಗಳಿಗಿಂತ ಉನ್ನತ ಶ್ರೇಣಿಯದ್ದಾಗಿದ್ದು, ಅದರಲ್ಲಿರುವ ಸೆನ್ಸರ್‌ಗಳು ಸಂಗೀತವನ್ನು ಸ್ವಯಂಚಾಲಿತವಾಗಿ ನುಡಿಸಲು ಹಾಗೂ ನಿಲ್ಲಿಸಲು ಕೂಡ ಶಕ್ತವಾಗಿವೆಯೆಂದು ಕಂಪೆನಿ ಹೇಳಿಕೊಂಡಿದೆ.
ಆದರೆ 16.5 ಎಂ.ಎಂ.x18 ಎಂಎಂ x40.5 ಎಂಎಂ ಅಳತೆಯ ಈ ಏರ್ ಪೋಡ್‌ಗಳು ಆಸ್ಟ್ರೇಲಿಯನ್ ಕಾಂಪಿಟೀಶನ್ ಎಂಡ್ ಕನ್ಸೂಮರ್ ಕಮಿಶನ್ ಪ್ರಾಡಕ್ಟ್ ಸೇಫ್ಟಿ ಚೋಕ್ ಚೆಕ್ ಗೆ ಸಮನಾಗಿದೆ. ಆದರೆ ಯಾವುದೇ ಉತ್ಪನ್ನ ಈ ಚೋಕ್ ಚೆಕ್ ಒಳಗೆ ಹೋಗುವುದೆಂದಾದರೆ ಅದು ಮಗುವೊಂದರ ಗಂಟಲನ್ನು ಬ್ಲಾಕ್ ಮಾಡುವ ಸಾಧ್ಯತೆಯಿದೆ.
ಚೋಕ್ ಚೆಕ್ ಒಂದು ಆನ್‌ಲೈನ್ ರಿಸೋರ್ಸ್ ಆಗಿದ್ದು, ಸಣ್ಣ ಮಕ್ಕಳಿಗೆ ಉಸಿರುಗಟ್ಟಿಸುವ ಅಪಾಯವಿರುವ ಸಾಧನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇಲ್ಲಿ ಲಭ್ಯವಿರುವ ಟೂಲ್‌ನ ಪ್ರಿಂಟ್ ತೆಗೆದು ಅದನ್ನು ಸಿಲಿಂಡರ್ ಆಕಾರದಲ್ಲಿ ಕತ್ತರಿಸಿದರೆ ಅದು 36 ತಿಂಗಳು ವಯಸ್ಸಿನವರೆಗಿನ ಮಕ್ಕಳ ಗಂಟಲಿನ ಆಕಾರಕ್ಕೆ ಸಮವಾಗಿರುತ್ತದೆ.
ಏರ್ ಪೋಡ್ ಅಳತೆಯನ್ನು ಫೇರ್ ಫೇಕ್ಸ್ ಮೀಡಿಯಾ ಪರೀಕ್ಷೆಗೊಳಪಡಿಸಿದಾಗ ಅದು ಈ ಸಿಲಿಂಡರ್ ಒಳಗೆ ತೂರುತ್ತದೆ.
ಆದರೆ ಏರ್ ಪೋಡ್ ಮಕ್ಕಳ ಆಟಿಕೆಯಲ್ಲವಾಗಿದ್ದು, ಈ ನಿಟ್ಟಿನಲ್ಲಿ ಅದನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿಲ್ಲವೆಂದು ಕಂಪೆನಿ ಹೇಳಿಕೊಂಡಿದೆಯಲ್ಲದೆ ಅವುಗಳನ್ನು ಸಣ್ಣ ಮಕ್ಕಳಿಂದ ದೂರವಿರಿಸುವಂತೆ ನೋಡಿಕೊಳ್ಳಬೇಕೆಂದು ಹೇಳಿದೆ.