×
Ad

ಬಿಎಸ್ಎಫ್ ಪರೀಕ್ಷೆಯಲ್ಲಿ ಅಗ್ರಸ್ಥಾನಿ ಕಾಶ್ಮೀರದ ನಬೀಲ್ ವಾನಿ !

Update: 2016-09-08 22:49 IST

ಹೊಸದಿಲ್ಲಿ, ಸೆ. ೮: ಲಷ್ಕರೆ ತೈಬಾ ಕಮಾಂಡರ್ ಬುರ್ಹಾನ್ ವಾನಿ ಇತ್ತೀಚಿಗೆ ಸೇನೆಯ ಎನ್ ಕೌ ನಂಟರ್ ಗೆ ಬಲಿಯಾದ ಮೇಲೆ ಇಡೀ ಕಾಶ್ಮೀರ ಕಣಿವೆ ಪ್ರಕ್ಷುಬ್ಧಗೊಂಡಿದೆ. ಪ್ರತಿಭಟನೆಗಳಲ್ಲಿ ಹಲವರು ಪ್ರಾಣ ಕಳಕೊಂಡಿದ್ದಾರೆ, ಅದೆಷ್ಟೋ ಮಂದಿ ಗಂಭೀರ ಗಾಯಗೊಂಡಿದ್ದಾರೆ. ಒಟ್ಟಾರೆ ಕಾಶ್ಮೀರದ ಸ್ಥಿತಿ ಇನ್ನೂ ಸಹಜತೆಗೆ ಮರಳಿಲ್ಲ. ಹಾಗಾಗಿ ಎಲ್ಲರೂ ಬುರ್ಹಾನ್ ವಾನಿಯ ಬಗ್ಗೆಯೇ ಚರ್ಚಿಸುತ್ತಿರುವಾಗ ಇನ್ನೊಬ್ಬ ವಾನಿ ದೇಶದ ಗಮನ ಸೆಳೆದಿದ್ದಾನೆ. ಆದರೆ ಈ ವಾನಿ ತದ್ವಿರುದ್ಧ ಕಾರಣದಿಂದಾಗಿ ಈಗ ಚರ್ಚೆಯಲ್ಲಿರುವುದು ವಿಶೇಷ. ಈತನ ಹೆಸರು ನಬೀಲ್ ಅಹ್ಮದ್ ವಾನಿ !
ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ನಿವಾಸಿ ನಬೀಲ್ ವಾನಿ ಗಡಿ ರಕ್ಷಣಾ ಪಡೆ ( ಬಿಎಸ್ ಎಫ್ ) ಅಸಿಸ್ಟಂಟ್ ಕಮಾಂಡಂಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ. ಒಬ್ಬ ವಾನಿ ಗಡಿಯಲ್ಲಿ ಉಗ್ರರ ಜೊತೆ ಸೇರಿದ್ದರೆ , ಇನ್ನೊಬ್ಬ ವಾನಿ ದೇಶದ ಗಡಿ ರಕ್ಷಣೆಗಾಗಿ ಪಣ ತೊಟ್ಟು ಆಗ್ರ ಸ್ಥಾನಿಯಾಗಿದ್ದಾನೆ. " ಭಯೋತ್ಪಾದನೆ ವಿರುದ್ಧ ಹೋರಾಡುವ ಉದ್ದೇಶದಿಂದಲೇ ತಾನು ಬಿಎಸ್ ಎಫ್ ಸೇರುತ್ತಿದ್ದೇನೆ. ಅಲ್ಲಿ ಉತ್ತಮ ಸೇವೆ ಸಲ್ಲಿಸಿ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ( ಎನ್ ಐ ಎ ) ಸೇರಿ ದೇಶದ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುವುದು ನನ್ನ ಗುರಿ " ಎಂದು ವಾನಿ ಹೇಳಿದ್ದಾನೆ. 
ಕಾಶ್ಮೀರದ ಯುವಜನತೆಗೂ ವಾನಿ ಸಂದೇಶ ನೀಡಿರುವುದು ಗಮನಾರ್ಹವಾಗಿದೆ : " ನೀವು ಸರಿಯಾದ ದಾರಿಯಲ್ಲಿ ಹೋಗಿ. ದೇಶಕ್ಕಾಗಿ, ಮಾತೃಭೂಮಿಗಾಗಿ  ಸೇವೆ ಸಲ್ಲಿಸಿ. ನಿಮ್ಮ ದೇಶವನ್ನು ಜಗತ್ತು ಗುರುತಿಸಿ , ಗೌರವಿಸುವಂತೆ ಮಾಡಿ. ನಿಮ್ಮ ಕನಸು ನನಸು ಮಾಡಲು ಪ್ರಯತ್ನಿಸಿ. ಆದರೆ ಅದಕ್ಕಾಗಿ ತಪ್ಪು ದಾರಿ ಹಿಡಿಯಬೇಡಿ. ಅದು ಸುಲಭ. ಆದರೆ ಕಷ್ಟದ ಸರಿದಾರಿ ಹಿಡಿದವರೇ ಕೊನೆಗೆ ಗೆಲ್ಲುತ್ತಾರೆ " ಎಂದು ವಾನಿ ಹೇಳಿದ್ದಾನೆ.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News