ಆವಾಜ್-ಎ-ಪಂಜಾಬ್ ರಾಜ್ಯವನ್ನು ಹಾಳುಗೆಡವಿರುವರಲ್ಲಿ ನಡುಕ ಹುಟ್ಟಿಸಲಿದೆ: ಸಿಧು
ಚಂಡಿಗಡ,ಸೆ.8: ತನ್ನ ನೂತನ ರಾಜಕೀಯ ಪಕ್ಷ ಆವಾಜ್-ಎ-ಪಂಜಾಬ್‌ಗೆ ಗುರುವಾರ ಇಲ್ಲಿ ವಿಧ್ಯುಕ್ತ ಚಾಲನೆ ನೀಡಿದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿ ನವಜೋತ ಸಿಂಗ್ ಸಿಧು ಅವರು, ಪಕ್ಷವು ರಾಜ್ಯದ ಪುನರುತ್ಥಾನಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು. ರಾಜ್ಯವನ್ನು ಹಾಳುಗೆಡವಿರುವ ವ್ಯವಸ್ಥೆಯನ್ನು ನಡುಗಿಸಲು ಪಕ್ಷವು ಬಯಸಿದೆ ಎಂದ ಅವರು, ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವವರಿಂದ ಇದು ಸಾಧ್ಯವಿಲ್ಲ ಎಂದರು.
ಸಿಧು ಮಾಜಿ ಹಾಕಿ ಆಟಗಾರ ಪರ್ಗತ್ ಸಿಂಗ್,ಪಕ್ಷೇತರ ಶಾಸಕರಾದ ಬಲ್ವಿಂದರ್ ಸಿಂಗ್ ಬೈನ್ಸ್ ಮತ್ತು ಸಿಮರಜಿತ್ ಸಿಂಗ್ ಬೈನ್ಸ್ ಅವರೊಂದಿಗೆ ಸೇರಿಕೊಂಡು ಕಳೆದ ವಾರ ನೂತನ ಪಕ್ಷವನ್ನು ಹುಟ್ಟುಹಾಕಿದ್ದರು. ಪಂಜಾಬ ವಿಧಾನಸಭಾ ಚುನಾವಣೆಗೆ ಐದು ತಿಂಗಳ ಮುನ್ನ ನೂತನ ಪಕ್ಷವು ಅಸ್ತಿತ್ವಕ್ಕೆ ಬಂದಿದೆ.
ಸಿಧು ಜುಲೈ 18ರಂದು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಾಗ ಅವರು ಬಿಜೆಪಿಯನ್ನು ತೊರೆದು ಆಪ್‌ಗೆ ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು. ಪಂಜಾಬ್‌ನಿಂದ ದೂರವುಳಿಯುವಂತೆ ಪಕ್ಷದ ಹೈಕಮಾಂಡ್ ತನಗೆ ಸೂಚಿಸಿರುವುದರಿಂದ ರಾಜೀನಾಮೆ ನೀಡಿರುವುದಾಗಿ ಸಿಧು ಆಗ ಹೇಳಿದ್ದರು.