ಕ್ರೈಸ್ತ ವಿವಾಹ ವಿಚ್ಛೇದನ ಕಾನೂನು ತಿದ್ದುಪಡಿಗೆ ಅನುಮತಿ
ಹೊಸದಿಲ್ಲಿ, ಸೆಪ್ಟಂಬರ್ 10: ಕ್ರೈಸ್ತ ವಿವಾಹವಿಚ್ಛೇದನ ಕಾನೂನಿಗೆ ತಿದ್ದುಪಡಿ ತರುವ ಶಿಫಾರಸಿಗೆ ಕೇಂದ್ರ ಕಾನೂನು ಸಚಿವಾಲಯ ಅನುಮತಿ ನೀಡಿದೆ ಎಂದು ವರದಿಯಾಗಿದೆ. ವಿವಾಹ ವಿಚ್ಛೇದನಕ್ಕಾಗಿ ದಂಪತಿಗಳು ಎರಡು ವರ್ಷ ದೂರವಾಗಿದ್ದು ಬದುಕಬೇಕೆಂಬ ನಿಬಂಧನೆಯನ್ನು ಒಂದುವರ್ಷಕ್ಕೆ ಇಳಿಕೆ ಮಾಡಬೇಕೆಂದು ಶಿಫಾರಸು ಮಾಡಲಾಗಿತ್ತು. ಇದು ಈಗ ಅಂಗೀಕೃತವಾಗಿದೆ.
ಬೇರೆ ಸಮುದಾಯಗಳಲ್ಲಿ ದಂಪತಿಗಳು ವಿವಾಹವಿಚ್ಛೇದನಕ್ಕಾಗಿ ಒಂದು ವರ್ಷ ಬೇರೆಯಾಗಿ ದೂರವಿದ್ದು ಬದುಕಿದರೆ ಸಾಕೆಂಬ ನಿಯಮವಿರುವಾಗ ಕ್ರೈಸ್ತಧರ್ಮೀಯರಲ್ಲಿ ಮಾತ್ರ ಎರಡು ವರ್ಷ ಆಗಬೇಕೆಂಬ ಕಾನೂನಿಗೆ ತಿದ್ದುಪಡಿ ತರಬೇಕೆಂದು ಸುಪ್ರೀಂಕೋರ್ಟ್ ಕೇಂದ್ರಸರಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ 1869ರ ಕ್ರೈಸ್ತ ವಿವಾಹ ವಿಚ್ಛೇದನ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರಸರಕಾರ ತೀರ್ಮಾನಿಸಿದೆ. 147ವರ್ಷದಷ್ಟು ಹಳೆಯ ಕಾನೂನು ತಿದ್ದುಪಡಿಯೊಂದಿಗೆ ಮೂಲೆಪಾಲಾಗಲಿದೆ.
ತಿದ್ದುಪಡಿ ಪಾರ್ಲಿಮೆಂಟ್‌ನಲ್ಲಿ ಪಾಸಾದರೆ ಒಂದುವರ್ಷ ದೂರವಾಗಿ ಜೀವಿಸಿದ ಬಳಿಕ ಕ್ರೈಸ್ತದಂಪತಿಗಳಿಗೆ ವಿವಾಹವಿಚ್ಛೇದನ ದೊರಯಲಿದೆ. 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಿದ್ದುಪಡಿಗೆ ಸಹಮತ ವ್ಯಕ್ತಪಡಿಸಿವೆ. ಪಾರ್ಲಿಮೆಂಟ್‌ನ ಚಳಿಗಾಲದ ಸಮ್ಮೇಳನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ ಅದನ್ನು ಅಂಗೀಕರಿಸಲು ಕೇಂದ್ರಸರಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.