11 ವರ್ಷಗಳ ನಂತರ ಜೈಲಿನಿಂದ ಹೊರಬಂದ ಆರ್‌ಜೆಡಿ ನಾಯಕ ಶಹಾಬುದ್ದೀನ್

Update: 2016-09-10 16:43 GMT

ಪಾಟ್ನಾ,ಸೆ.10: ಲಾಲು ಪ್ರಸಾದ್ ಯಾದವ ಅವರ ಆರ್‌ಜೆಡಿಯ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಅವರು 11 ವರ್ಷಗಳ ಜೈಲುವಾಸದ ಬಳಿಕ ಇಂದು ಹೊರಜಗತ್ತಿನಲ್ಲಿ ಕಾಲಿರಿಸಿದರು. ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.

 ತಮ್ಮ ನಾಯಕನ ಸ್ವಾಗತಕ್ಕಾಗಿ ಶಹಾಬುದ್ದೀನ್‌ರ ಸಾವಿರಾರು ಬೆಂಬಲಿಗರು ಭಾಗಲ್ಪುರ ಜೈಲಿನ ಹೊರಗೆ ನೆರೆದಿದ್ದರು. ಅವರು ತನ್ನ ಸ್ವಗ್ರಾಮ ಸಿವಾನ್ ಜಿಲ್ಲೆಯ ಪಾರ್ತಾಪುರಕ್ಕೆ ತೆರಳುವಾಗ ಸಾಲು ಸಾಲು ವಾಹನಗಳು ಬೆಂಗಾವಲಾಗಿ ಸಾಗಿದ್ದವು.

ಸಿವಾನ್‌ನಿಂದ ನಾಲ್ಕು ಬಾರಿ ಸಂಸದರಾಗಿರುವ ಶಹಾಬುದ್ದೀನ್(49) ವಿರುದ್ಧ 40ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿದ್ದು, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಲಾಲು ಪ್ರಸಾದ್‌ಗೆ ಬೆಂಬಲವನ್ನು ಘೋಷಿಸಿದ ಅವರು,ಬಿಹಾರದ ಮುಖ್ಯಮಂತ್ರಿ ನಿತೀಶ ಯಾದವ್ ಸಂದರ್ಭಗಳ ಲಾಭ ಪಡೆದುಕೊಂಡು ನಾಯಕನಾಗಿದ್ದಾರೆ. ಲಾಲು ಪ್ರಸಾದ ತನ್ನ ನಾಯಕ ಎಂದು ಹೇಳಿದರು.

ಪ್ರಸ್ತುತ ಆರ್‌ಜೆಡಿ ಮತ್ತು ನಿತೀಶರ ಜೆಡಿಯು ಬಿಹಾರದಲ್ಲಿ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿವೆಯಾದರೂ 2005ರಲ್ಲಿ ಶಹಾಬುದ್ದೀನ್ ಜೈಲಿಗೆ ಹೋದಾಗ ಅವರಿಬ್ಬರೂ ಬದ್ಧವೈರಿಗಳಾಗಿದ್ದರು. ಆಗ ಬಿಜೆಪಿಯೊಂದಿಗೆ ಸೇರಿಕೊಂಡು ಸರಕಾರ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ ಕುಮಾರ್ ಸಿವಾನ್‌ನಲ್ಲಿ ಶಹಾಬುದ್ದೀನ್‌ನ ಅಟ್ಟಹಾಸಕ್ಕೆ ಅಂತ್ಯ ಹಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News