ಟ್ರಂಪ್ ಸೋಲಿಸಲು ಹಿಲರಿಗೆ 134 ಕೋಟಿ ರೂ.
ನ್ಯೂಯಾರ್ಕ್, ಸೆ. 10: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸಲು ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗೆ ಫೇಸ್‌ಬುಕ್ ಸಹಸ್ಥಾಪಕ ಡಸ್ಟಿನ್ ಮೊಸ್ಕೊವಿಝ್ 20 ಮಿಲಿಯ ಡಾಲರ್ (ಸುಮಾರು 134 ಕೋಟಿ ರೂಪಾಯಿ) ನೀಡುವ ಭರವಸೆ ನೀಡಿದ್ದಾರೆ.
‘‘ಅಮೆರಿಕದಲ್ಲಿ ಇಂದು ನಡೆಯುತ್ತಿರುವ ಧ್ರುವೀಕರಣ ಪ್ರಯತ್ನಗಳು ತಿಳುವಳಿಕೆರಹಿತ ಜನಾಂಗವೊಂದರ ಉದಯಕ್ಕೆ ಕಾರಣವಾಗಿದೆ. ಹಾಗಾಗಿ, ಇದನ್ನು ತಡೆಯುವ ಪ್ರಯತ್ನವಾಗಿ ಹಿಲರಿ ಕ್ಲಿಂಟನ್‌ಗೆ ಹಣ ನೀಡಲು ನಾನು ಮತ್ತು ನನ್ನ ಹೆಂಡತಿ ಕ್ಯಾರಿ ನಿರ್ಧರಿಸಿದ್ದೇವೆ’’ ಎಂದು ಮೊಸ್ಕೊವಿಝ್ ಹೇಳಿದ್ದಾರೆ.
ಮೊಸ್ಕೊವಿಝ್ ಹಾರ್ವರ್ಡ್‌ನಲ್ಲಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ರೊಂದಿಗೆ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು. ತಾನು ಮತ್ತು ತನ್ನ ಹೆಂಡತಿ ಓರ್ವ ಅಭ್ಯರ್ಥಿಗೆ ಬೆಂಬಲ ಸೂಚಿಸಿ ದೇಣಿಗೆ ನೀಡುತ್ತಿರುವುದು ಇದೇ ಮೊದಲ ಬಾರಿ ಎಂದು ಅವರು ‘ಮೀಡಿಯಂ’ನಲ್ಲಿನ ಬ್ಲಾಗ್ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ.