×
Ad

ಬಲೂಚ್ ನಾಗರಿಕರ ಮೇಲೆ ಪಾಕ್ ಪಡೆಗಳಿಂದ ದಾಳಿ

Update: 2016-09-10 23:50 IST

ಕ್ವೆಟ್ಟಾ, ಸೆ. 10: ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನ್ ಪ್ರಾಂತಾದ್ಯಂತ ಹೊಸದಾಗಿ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಪ್ರಾಂತದ ಪ್ರಮುಖ ರಾಜಕೀಯ ಪಕ್ಷ ಬಲೂಚ್ ರಿಪಬ್ಲಿಕನ್ ಪಾರ್ಟಿಯ ನಾಯಕ ಅಬ್ದುಲ್ ನವಾಝ್ ಬುಗ್ತಿ ಆರೋಪಿಸಿದ್ದಾರೆ.

ಈಗ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಾಗರಿಕರ ಮೇಲೂ ದಾಳಿ ನಡೆಸಲಾಗುತ್ತಿದೆ ಹಾಗೂ ಅವರನ್ನು ಅಪಹರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬಲೂಚಿಸ್ತಾನದಲ್ಲಿ ಇಸ್ಲಾಮಾಬಾದ್ ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಯನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವಂತೆ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ‘‘ಬಲೂಚಿಸ್ತಾನ್ ಪ್ರಾಂತದ ನಸೀರಾಬಾದ್ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಪಾಕ್ ಪಡೆಗಳು ದಾಳಿಗಳನ್ನು ನಡೆಸಿವೆ. ಬಲೂಚಿ ನಾಗರಿಕರಿಗೆ ಕಿರುಕುಳ ನೀಡಲಾಗಿದೆ ಹಾಗೂ ಹಲವು ಮಂದಿಯನ್ನು ಅಪಹರಿಸಲಾಗಿದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಬಲೂಚ್ ರಿಪಬ್ಲಿಕನ್ ಪಕ್ಷದ ಪ್ರತಿನಿಧಿಯೂ ಆಗಿರುವ ಬುಗ್ತಿ ಆರೋಪಿಸಿದ್ದಾರೆ.

‘‘ದೇರಾ ಬುಗ್ತಿಯ ವಿವಿಧ ಭಾಗಗಳಲ್ಲಿ ಬಲೂಚ್ ನಾಗರಿಕರ ಮೇಲೆ ಆಕ್ರಮಣ ನಡೆಸಲಾಗಿದೆ ಹಾಗೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬಕ್ಕೆ ಸೇರಿದ 19ಕ್ಕೂ ಹೆಚ್ಚು ನಾಗರಿಕರನ್ನು ಅಪಹರಿಸಲಾಗಿದೆ’’ ಎಂದು ವೀಡಿಯೊ ಸಂದೇಶವೊಂದರಲ್ಲಿ ಬುಗ್ತಿ ವಾರ್ತಾ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.ತುರ್ಬತ್ ಪ್ರದೇಶದಲ್ಲಿರುವ ರಾಜಕೀಯ ಕಾರ್ಯಕರ್ತರೊಬ್ಬರ ಮನೆಗೆ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ನಾಲ್ಕು ದಿನಗಳಿಂದ ಮುತ್ತಿಗೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘‘ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡ ಅವರ ಕುಟುಂಬ ಹಸಿವಿನಿಂದ ಬಳಲುತ್ತಿದೆ ಹಾಗೂ ಅವರನ್ನು ಸಂಪರ್ಕಿಸಲು ಪಾಕಿಸ್ತಾನಿ ಪಡೆಗಳು ಯಾರಿಗೂ ಅವಕಾಶ ನೀಡುತ್ತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News