ತಂದೆಯಿಂದ ಲೈಂಗಿಕ ಕಿರುಕುಳ: ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಪುತ್ರಿಯ ಆರೋಪ

Update: 2016-09-11 03:59 GMT

ಜೈಪುರ, ಸೆ.11: ತಂದೆಯಿಂದಲೇ ಲೈಂಗಿಕ ದೌರ್ಜನ್ಯವಾಗಿದೆ ಎಂದು ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಮೀನಾ ಅವರ ಪುತ್ರಿ ಆರೋಪ ಮಾಡುವುದರೊಂದಿಗೆ ಕುಟುಂಬದ ವ್ಯಾಜ್ಯ ಬೀದಿಗೆ ಬಂದಿದೆ.

ಅವರ ಪರಿತ್ಯಕ್ತ ಪತ್ನಿ ಗೀತಾ ಸಿಂಗ್ ಅವರು ಈ ಸಂಬಂಧ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ತಾವು ಹಾಗೂ ಪುತ್ರಿ ಗೀತಾಂಜಲಿ ಸಿಂಗ್, ಮೀನಾ ಹಾಗೂ ಅವರ ಕುಟುಂಬದ ಸದಸ್ಯರಿಂದ ಯಾವ ರೀತಿಯಲ್ಲಿ ಕಿರುಕುಳ ಎದುರಿಸುತ್ತಿರುವುದಾಗಿ ವಿವರ ಬಹಿರಂಗಪಡಿಸಿದರು.

ಗೀತಾಂಜಲಿ ಸಿಂಗ್ ಕಳೆದ ಎಪ್ರಿಲ್ 21ರಂದು ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿ, ತಂದೆಯ ವಿರುದ್ಧ ತಾಯಿ ಮಾಡಿದ ಲೈಂಗಿಕ ಕಿರುಕುಳ ಆರೋಪಕ್ಕೆ ದನಿಗೂಡಿಸಿದ್ದಾರೆ. ತಾಯಿ ವಿರುದ್ಧದ ಹಿಂಸೆ ಹಾಗೂ ಕ್ರೌರ್ಯವನ್ನು ವಿವರಿಸಿ, ತನಗೂ ತಂದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ.

"ಓಂಪ್ರಕಾಶ್ ಸಿಂಗ್ ಅವರು ಪತ್ನಿಗೆ ಹೊಡೆಯುವ ಮತ್ತು ಮಕ್ಕಳಿಗೆ ಕಿರುಕುಳ ನೀಡುವವರು. ನನ್ನನ್ನು ಅವರು ಹೊರೆ ಎಂದು ಪರಿಗಣಿಸಿದ್ದರು. ನನಗಾಗಿ ವೆಚ್ಚ ಮಾಡುವ ಒಂದು ರೂಪಾಯಿಗೂ ನನ್ನನ್ನು ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು. ನಾನು 13 ವರ್ಷದವಳಿದ್ದಾಗ ತಂದೆ ಲೈಂಗಿಕ ಚೇಷ್ಟೆ ನಡೆಸಿದರು. ನನ್ನ ಕೊಠಡಿಗೆ ಬಂದು, ಸ್ಪರ್ಶಿಸಬಾರದ ನನ್ನ ದೇಹದ ಭಾಗಗಳನ್ನು ಸ್ಪರ್ಶಿಸಿದರು ಎಂದು ಹೇಳಲು ಅವಮಾನವಾಗುತ್ತಿದೆ. ನನ್ನ ತುಟಿಗಳಿಗೆ ಮುತ್ತಿಕ್ಕುತ್ತಿದ್ದರು. ನನ್ನ ಎದೆಯನ್ನು ಅವರ ಎದೆಯಿಂದ ಒತ್ತುತ್ತಿದ್ದರು" ಎಂದು ಈಗ ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಗೀತಾಂಜಲಿ ದೂರಿದ್ದಾರೆ.

ಈ ವ್ಯಕ್ತಿಯಿಂದಾಗಿ ನನ್ನ ಮಾನವ ಗೌರವ, ಆತ್ಮಗೌರವ, ಮನಸ್ಸು ಹಾಗೂ ಆತ್ಮ ಎಲ್ಲವೂ ಹಾಳಾಗಿದೆ ಎಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News