×
Ad

ಮಗಳ ಮೃತದೇಹ ಸಾಗಿಸಲು ಹಣವಿಲ್ಲದೇ ಭಿಕ್ಷೆ ಬೇಡಿದ ತಂದೆ

Update: 2016-09-11 10:57 IST

ಲಕ್ನೋ, ಸೆ.11: ಒಡಿಶಾದಲ್ಲಿ ವ್ಯಕ್ತಿಯೊಬ್ಬ, ಮೃತ  ಪತ್ನಿಯನ್ನು ವಾಹನದಲ್ಲಿ ಸಾಗಿಸಲು ಸಾಧ್ಯವಾಗದೇ ಹೆಗಲಮೇಲೆ ಹೊತ್ತುಕೊಂಡು ಸಾಗಿದ್ದ ಅಮಾನವೀಯ ಘಟನೆ ಮಾಸುವ ಮೊದಲೇ ಮತ್ತೊಂದು ಅಮಾನವೀಯ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

 ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಮಗಳನ್ನು ವಾಹನದಲ್ಲಿ ಮನೆಗೆ ಸಾಗಿಸಲು ಹಣವಿಲ್ಲದೆ ಫುಟ್‌ಪಾತ್‌ನಲ್ಲಿ ಹೆಣವಿಟ್ಟುಕೊಂಡು ಭಿಕ್ಷೆ ಬೇಡಿರುವ ಘಟನೆ ನಡೆದಿದೆ. ರಮೇಶ್ ಎಂಬ ವ್ಯಕ್ತಿ ಮಗಳ ಶವವನ್ನು ರಸ್ತೆ ಬದಿಯಲ್ಲಿಟ್ಟುಕೊಂಡು ದಾರಿಹೋಕರಲ್ಲಿ ಭಿಕ್ಷೆ ಬೇಡುತ್ತಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತನ್ನ ಮಗಳನ್ನು ಸಾಗಿಸಲು ವಾಹನಕ್ಕಾಗಿ ಅಂಗಲಾಚಿದರೂ ಯಾರೂ ಕೂಡ ರಮೇಶ್ ನೆರವಿಗೆ ಬಂದಿಲ್ಲ. ಇದರಿಂದ ಬೇಸತ್ತ ರಮೇಶ್ ಆಸ್ಪತ್ರೆಯ ಹೊರಗಿನ ಫುಟ್‌ಪಾತ್‌ನಲ್ಲಿ ಮಗಳ ಹೆಣ ಇಟ್ಟುಕೊಂಡು ಭಿಕ್ಷೆ ಬೇಡಲಾರಂಭಿಸಿದ್ದಾನೆ. ಮೃತ ಬಾಲಕಿ ದಾಖಲಾದ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿ ಅಮಿತ್ ಸಿಂಗ್, ‘‘ಮೃತ ಬಾಲಕಿಯ ತಂದೆ ಆಸ್ಪತ್ರೆಯ ಸಿಬ್ಬಂದಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರೆ, ಖಂಡಿತವಾಗಿಯೂ ಅವರು ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಅವರು ಹಾಗೇ ಮಾಡಿರಲಿಲ್ಲ’’ ಎಂದು ಹೇಳಿದ್ದಾರೆ.

 ಬಾಲಕಿಯನ್ನು ಗುರುವಾರ ವಿಪರೀತ ಜ್ವರದಿಂದಾಗಿ ಮಿತೌಲಿ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ನಂತರ ಬಾಲಕಿಯನ್ನು ಲಕ್ಷ್ಮೀಪುರ ಖೇರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News