×
Ad

ಪಾಕಿಸ್ತಾನಿ ಬಾಲಕಿಯ ಶಾಲಾ ಪ್ರವೇಶಕ್ಕೆ ಸುಷ್ಮಾ ಸಹಾಯಹಸ್ತ

Update: 2016-09-11 12:26 IST

ಹೊಸದಿಲ್ಲಿ, ಸೆ.11: ಪಾಕಿಸ್ತಾನಿ ಹಿಂದೂ ಬಾಲಕಿಯೊಬ್ಬಳು ದಿಲ್ಲಿ ಶಾಲೆಯಲ್ಲಿ ಪ್ರವೇಶ ಪಡೆಯಲು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ ಚಾಚಿದ್ದಾರೆ. ಬಾಲಕಿಯ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

"ಆಧಾರ್ ಕಾರ್ಡ್ ಇಲ್ಲದ ಕಾರಣ ನನಗೆ ದಿಲ್ಲಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅಡಚಣೆ ಉಂಟಾಗಿತ್ತು. ಸೋಮವಾರ ಶಾಲೆಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ" ಎಂದು ಮಧು ಎಂಬ ಬಾಲಕಿಯ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

"ಅವರು ಅರವಿಂದ್ ಕೇಜ್ರಿವಾಲ್ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದು, ನನಗೆ ಆದಷ್ಟು ಶೀಘ್ರವಾಗಿ ಶಾಲಾ ಪ್ರವೇಶ ದೊರೆಯುವ ನಿರೀಕ್ಷೆ ಇದೆ" ಎಂದು ಆಕೆ ಹೇಳಿದ್ದಾರೆ. ಧಾರ್ಮಿಕ ಶೋಷಣೆ ಕಾರಣದಿಂದ ಮಧು ಹಾಗೂ ಅವರ ಕುಟುಂಬ ಎರಡು ವರ್ಷ ಹಿಂದೆ ಪಾಕಿಸ್ತಾನದಿಂದ ಹೊರಬಂದಿತ್ತು. ಇದೀಗ ಒಂಬತ್ತನೆ ತರಗತಿಗೆ ದಿಲ್ಲಿ ಶಾಲೆಯಲ್ಲಿ ಪ್ರವೇಶ ಪಡೆಯಲು ಬಾಲಕಿ ಹಲವು ತಿಂಗಳಿಂದ ಹೆಣಗುತ್ತಿದ್ದಳು'' ಎಂದು ‘ದ ಹಿಂದೂ’ ವರದಿ ಮಾಡಿತ್ತು.

ಟ್ವಿಟ್ಟರ್‌ನಲ್ಲಿ ಸುಷ್ಮಾಗೆ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಸಚಿವೆ ಸಂಜೆ ಏಳು ಗಂಟೆಗೆ ತಮ್ಮ ನಿವಾಸಕ್ಕೆ ಬಂದು ಭೇಟಿ ಮಾಡುವಂತೆ ಹದಿನಾರರ ಬಾಲಕಿಯನ್ನು ಆಹ್ವಾನಿಸಿದ್ದರು. ಸಂಕಷ್ಟದಲ್ಲಿರುವ ಪಾಕಿಸ್ತಾನಿ ಹಿಂದೂ ಬಾಲಕಿಯರ ನೆರವಿಗೆ ಸಚಿವೆ ಮುಂದಾಗಿರುವುದು ಇದೇ ಮೊದಲಲ್ಲ. 17 ವರ್ಷದ ಮಶಾಳ್ ಮಹೇಶ್ವರಿ ಎಂಬಾಕೆಗೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೂಡಾ ಸುಷ್ಮಾ ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News