ಬುಡಕಟ್ಟು ಹುಡುಗಿಗೆ ಆಕ್ಸ್ ಫರ್ಡ್ ನಲ್ಲಿ ಇಂಗ್ಲಿಷ್ ಕಲಿಯುವ ಭಾಗ್ಯ
ಭೋಪಾಲ್, ಸೆ.11: ಮನಸ್ಸಿದ್ದರೆ ಮಾರ್ಗ ಎಂಬ ನಾಣ್ನುಡಿಯನ್ನು ಅಕ್ಷರಶಃ ನಿಜಗೊಳಿಸಿದ ಅಪರೂಪದ ನಿದರ್ಶನ ಇದು. ಆಕ್ಸ್‌ಫರ್ಡ್ ಶಾಲೆಯಲ್ಲಿ ಇಂಗ್ಲಿಷ್ ಭಾಷೆ ಅಧ್ಯಯನ ಕೈಗೊಳ್ಳಬೇಕು ಎಂಬ ಬುಡಕಟ್ಟು ಜನಾಂಗದ ಹದಿನಾರು ವರ್ಷದ ಬಾಲಕಿಯ ಕನಸು ನನಸಾಗುವ ಹಂತಕ್ಕೆ ಬಂದಿದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಈಕೆ ಇಂಗ್ಲಿಷ್ ಕಲಿಕೆಗೆ ಆಕ್ಸ್‌ಫರ್ಡ್‌ಗೆ ತೆರಳಲಿದ್ದಾಳೆ.
ಪನ್ನಾ ಜಿಲ್ಲೆಯ ಜನ್ವಾರ್ ಎಂಬ ಗುಡ್ಡಗಾಡು ಗ್ರಾಮದ ಆಶಾ ಗೊಂಡ್ ಎಂಬ ಬಾಲಕಿಗೆ ಇಂಗ್ಲಿಷ್ ಪರಿಚಯವಾದದ್ದು ಇತ್ತೀಚೆಗೆ. ಆ ಭಾಷೆಯ ಬಗ್ಗೆ ಕೆಲವೇ ದಿನಗಳಲ್ಲಿ ಈಕೆಯಲ್ಲಿ ಅಪಾರ ಒಲವು ಕಾಣಿಸಿಕೊಂಡಿತು. ಅಲ್ರಿಕ್ ರಿನ್ಹಾರ್ಡ್ ಎಂಬ ಜರ್ಮನ್ ಮಹಿಳೆ ಈಕೆಗೆ ಅಗತ್ಯವಾದ ಎಲ್ಲ ನೆರವು ಹಾಗೂ ಉತ್ತೇಜನ ನೀಡಿದ್ದರ ಫಲ ಇದು. ಜನ್ವಾರ್‌ನಲ್ಲಿ ಸ್ಕೇಟ್ ಪಾರ್ಕ್ ಆರಂಭಿಸಿ ಶಾಲೆಗೆ ಹೋಗುವ ಎಲ್ಲ ಬುಡಕಟ್ಟು ಮಕ್ಕಳಿಗೆ ಇಂಗ್ಲಿಷ್ ಹಾಗೂ ಸ್ಕೇಟಿಂಗ್ ತರಬೇತಿಯನ್ನು ಇವರು ನೀಡುತ್ತಿದ್ದಾರೆ.
ಮನೋಹರ ಕಲ್ಯಾಣ್ ಹೈಸ್ಕೂಲ್‌ನಲ್ಲಿ 10ನೆ ತರಗತಿ ಉತ್ತೀರ್ಣಳಾಗಿರುವ ಆಶಾ ಬೇಸಿಗೆ ಶಿಬಿರದಲ್ಲಿ ಇಂಗ್ಲಿಷ್ ಕಲಿಕೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ. ಆದ್ದರಿಂದ ಆಕೆಯನ್ನು ಇಂಗ್ಲಿಷ್ ಅಧ್ಯಯನಕ್ಕೆ ಇಂಗ್ಲೆಂಡಿಗೆ ಕರೆದೊಯ್ಯಲು ನಾನು ನಿರ್ಧರಿಸಿದ್ದೇನೆ. ಆರಂಭದಲ್ಲಿ ತಂದೆ ಧರ್ಮರಾಜ್ ಹಾಗೂ ತಾಯಿ ಕಮಲಾ ಗೊಂಡ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅವರ ಮನವೊಲಿಸಲು ಎಂಟು ತಿಂಗಳು ಬೇಕಾಯಿತು. ಅವರ ಇಡೀ ಕುಟುಂಬ ಕೃಷಿಯನ್ನೇ ಅವಲಂಬಿಸಿದೆ. ಇಲ್ಲಿನ ಜನ ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣ ಮದುವೆ ಮಾಡುತ್ತಾರೆ. ಇಂಗ್ಲಿಷ್ ಭಾಷೆಯನ್ನು ಇಂಗ್ಲೆಂಡಿನಲ್ಲಿ ಕಲಿಯುವ ಮಹತ್ವದ ಅರಿವು ಅವರಿಗೆ ಇಲ್ಲ" ಎಂದು ರಿನ್ಹಾರ್ಡ್ ಹೇಳುತ್ತಾರೆ.
ಈ ಮನವೊಲಿಕೆ ಕಾರ್ಯಕ್ಕೆ ಪನ್ನಾ ಮಹಾರಾಜ ಲೋಕೇಂದ್ರ ಪ್ರತಾಪ್ ಸಿಂಗ್ ಹಾಗೂ ಶಾಲಾ ಶಿಕ್ಷಕ ಅವಧ್ ಬಿಹಾರಿ ಅವರನ್ನು ರಿನ್ಹಾರ್ಡ್ ಕರೆತಂದಿದ್ದರು. ಇಡೀ ಸಮುದಾಯದಲ್ಲೇ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ ಮೊದಲ ಬಾಲಕಿ ಈಕೆ ಎಂದು ಮನವರಿಕೆ ಮಾಡಿ ಮನವೊಲಿಸಿದ್ದೇವೆ ಎಂದು ಅವರು ಹೇಳುತ್ತಾರೆ. "ಇದು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆವು. ಆದರೆ ಆಶಾ ತನ್ನ ಆಶಾಭಾವನೆಯನ್ನು ಬಿಡಲಿಲ್ಲ. ಇಂಗ್ಲಿಷ್ ಅಧ್ಯಯನಕ್ಕೆ ತೆರಳಲೇಬೇಕು ಎಂದು ಹಠ ಹಿಡಿದಿದ್ದಳು. ಅಂತಿಮವಾಗಿ ಒಪ್ಪಿಕೊಂಡರು'' ಎಂದು ಅವರು ಹೇಳಿದ್ದಾರೆ.