×
Ad

ಓಣಂನಲ್ಲಿ ಮಹಾಬಲಿ ಮುಖ್ಯ ಅಲ್ಲ, ವಿಷ್ಣು ಮುಖ್ಯ ಎಂದ ಆರೆಸ್ಸೆಸ್ ಮುಖವಾಣಿಯ ಲೇಖನ

Update: 2016-09-11 15:58 IST

ತಿರುವನಂತಪುರಂ, ಸೆಪ್ಟಂಬರ್ 11: ಕೇರಳೀಯರು ದೇವಂದಿರನ್ನೆಲ್ಲ ದೂರವಿಟ್ಟು ಮಾವೇಲಿ(ಮಹಾಬಲಿ)ಯನ್ನು ಯಾಕೆ ಅರಾಧಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಆರೆಸ್ಸೆಸ್, ಕೇರಳದ ಜನತೆಯ ಮುಂದಿರಿಸಿದ್ದು, ಅದರ ಮುಖವಾಣಿ ಕೇಸರಿ ಪ್ರಕಟಿಸಿದ ಈ ಕುರಿತ ಲೇಖನ ಇದೀಗ ಕೇರಳದಾದ್ಯಂತ ವಿವಾದವನ್ನು ಹುಟ್ಟುಹಾಕಿದೆ. ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳು ಈ ಹಿಂದೆಯೂ ತಮಗೆ ಸಮಯವಾದಗಲೆಲ್ಲಾ ಓಣಂ ಆಚರಣೆಯ ಅಸ್ತಿತ್ವವನ್ನೇ ಪ್ರಶ್ನಿಸುತ್ತಾ ಬಂದಿದ್ದಾರೆ. ಆದರೆ ಈಗ ಆರೆಸ್ಸೆಸ್ ಪತ್ರಿಕೆ ಕೇಸರಿ, ನೇರವಾಗಿ ಜನತೆಯ ಮುಂದೆ "ಮಾವೇಲಿಯನ್ನು ಆರಾಧಿಸಬೇಕಾಗಿಲ್ಲ. ಮಹಾವಿಷ್ಣು ಅವತಾರವಾದ ವಾಮನನು ಆರಾಧಿಸಬೇಕಾಗಿದೆ" ಎಂಬ ಈವರೆಗೂ ಕೇರಳೀಯರು ನಂಬುತ್ತಾ ಬಂದ ನಂಬಿಕೆ ವಿರುದ್ಧ ವಿಚಾರವನ್ನು ಜನರನಡುವೆ ಎಸೆದು ವ್ಯಾಪಕ ಗೊಂದಲ ಮತ್ತು ವಿವಾದಗಳ ಕಿಡಿ ಹಚ್ಚಿದೆ ಎಂದು ವರದಿಯಾಗಿದೆ.

ಅಸುರ ಚಕ್ರವರ್ತಿ ಮಾವೇಲಿಯನ್ನು ಆರಾಧಿಸುವುದಲ್ಲ ವಿಷ್ಣುವನ್ನು ಆರಾಧಿಸಬೇಕೆಂದು, ತಿರುವನಂತಪುರಂ ಸಂಸ್ಕೃತ ಕಾಲೇಜಿನ ಅಧ್ಯಾಪಕ ಡಾ. ಕೆ. ಉಣ್ಣಿಕೃಷ್ಣನ್ ನಂಬೂದಿರಿ ಕೇಸರಿಯಲ್ಲಿ ಲೇಖನ ಬರೆದು ಪ್ರತಿಪಾದಿಸಿದ್ದಾರೆ. ಮಾತ್ರವಲ್ಲ ಆರೆಸ್ಸೆಸ್ ಮಾವೇಲಿಬದಲಿಗೆ ವಾಮನ ಜಯಂತಿ ಆಚರಿಸುವ ಸಿದ್ಧತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಈ ರೀತಿ ಆರೆಸ್ಸೆಸ್ ತನ್ನ ಮುಖ ಪತ್ರಿಕೆ ಕೇಸರಿಯ ಓಣಂ ವಿಶೇಷಾಂಕದಲ್ಲಿ ಓಣಂ ಮಾವೇಲಿ ಜಯಂತಿಯಲ್ಲ ವಾಮನ ಜಯಂತಿಯಾಗಿದೆ ಎಂದು ಘೋಷಿಸಿಬಿಟ್ಟಿದೆ. ಕೇರಳದಲ್ಲಿ ಪ್ರಚಾರದಲ್ಲಿರುವ ವಾಮನನಿಗೆ ಸಂಬಂಧಿಸಿದ ಮಹಾಬಲಿಯ ಕಥೆ ಸುಳ್ಳು ಕಥೆಂದು. ವಾಮನನ್ನು ಬ್ರಾಹ್ಮಣನಾಗಿದ್ದು, ಆತನ ಪ್ರಶಂಸೆಯೇ ಓಣಂ ಆಗಿದೆ ಎಂದು ಆರೆಸ್ಸೆಸ್ ವಾದಿಸಿ ಪ್ರಚಾರಕ್ಕಿಳಿದಿದೆ.

ಆರೆಸ್ಸೆಸ್‌ನ ಕೇಸರಿ ಪತ್ರಿಕೆ ಪ್ರಕಟಿಸಿದ ಡಾ. ಕೆ. ಉಣ್ಣಿಕೃಷ್ಣನ್‌ರ "ತಿರುವೋಣಂ, ವಾಮನ ಜಯಂತಿ ಆಚರಣೆ" ಎಂಬ ಮುಖಪುಟ ಲೇಖನದ ಮೂಲಕ ಕೇರಳದಲ್ಲಿ ತಲಾತಲಾಂತರದಿಂದ ನಡೆದು ಬಂದ ಓಣಂ ಆಚರಣೆಯ ನಂಬಿಕೆಯನ್ನೇ ಆರೆಸ್ಸೆಸ್ ಕೆಣಕಿದಂತಾಗಿದೆ. ನಂಬೂದಿರಿಗಳು ಕೊಯ್ಲು ಉತ್ಸವ ಮತ್ತು ವಾಮನ ಜಯಂತಿಯನ್ನು ಒಟ್ಟಿಗೆ ಆಚರಿಸಿರಬಹುದು. ಅದುವೇ ಓಣಂ ಆಗಿದ್ದಿರಬಹುದೆಂದು ಹಿರಿಯರು ಹೇಳುತ್ತಾರೆ ಎಂದು ಲೇಖನದಲ್ಲಿ ತಮ್ಮ ವಾದವನ್ನು ಲೇಖಕ ಉಣ್ಣಿಕೃಷ್ಣನ್ ಮಂಡಿಸಿದ್ದಾರೆ. ಮಹಾಬಲಿಯ ಬದಲು ಕೇರಳೀಯರು ವಾಮನ ಜಯಂತಿ ಆಚರಿಸಬೇಕೆನ್ನುವುದಕ್ಕೆ ಇಂತಹ ತರ್ಕಗಳನ್ನು ಅವರು ತಂದು ನಿಲ್ಲಿಸಿದ್ದಾರೆ. ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕೇರಳವನ್ನು ಮಹಾಬಲಿ ಸಂದರ್ಶಿಸುತ್ತಾನೆ ಎಂಬ ಕತೆ ಕ್ರಮೇಣ ಸೇರ್ಪಡೆಗೊಳಿಸಿದ್ದಿರಬಹುದೆಂದು ಲೇಖನದಲ್ಲಿ ಊಹೆ ಮಾಡಲಾಗಿದೆ.

ಕೇರಳದಲ್ಲಿ ವ್ಯಾಪಕವಾಗಿ ನಂಬುತ್ತಿರುವ "ಶ್ರೇಷ್ಠ ಚಕ್ರವರ್ತಿಯಾದ ಮಹಾಬಲಿ ಎಂಬ ದಲಿತ ಅಸುರ ಚಕ್ರವರ್ತಿಯನ್ನು , ವಾಮನ ಎಂಬ ಸವರ್ಣೀಯರು ವಂಚಿಸಿದ್ದಾರೆ. ಬಲಿ ಆಳ್ವಿಕೆಯಲ್ಲಿದ್ದ ಮೂರು ಲೋಕಗಳನ್ನು ಬರೇ ಎರಡು ಅಡಿಯಲ್ಲಿ ಅಳೆದು, ಮಹಾಬಲಿಯ ತಲೆಗೆ ಒದ್ದು ಪಾತಾಳ ಲೋಕಕ್ಕೆ ದೂಡಿಹಾಕಿದ್ದಾರೆ ಎಂಬ ಕಥೆ ಸತ್ಯಕ್ಕೆ ದೂರವಾದದ್ದು ಎಂದು ಆರೆಸ್ಸೆಸ್ ಮುಖವಾಣಿ ಘೋಷಿಸುತ್ತಿದೆ. ಈ ಕಥೆಗೆ ಪುರಾಣಗಳಲ್ಲಿ ಇತಿಹಾಸದಲ್ಲಿ ಆಧಾರವಾದ ಯಾವುದೇ ಪುರಾವೆಗಳಿಲ್ಲ ಎಂದು ಡಾ. ಉಣ್ಣಿಕೃಷ್ಣನ್ ಹೇಳುತ್ತಾರೆ. ನಂತರ ಅವರೇ ಕೇರಳದಲ್ಲಿ ಇಂತಹ ಸುಳ್ಳು ಕಥೆ ಹೇಗೆ ಹರಡಿತು ಎಂದು ಪ್ರಶ್ನೆಹಾಕಿದ್ದಾರೆ.. ಬ್ರಾಹ್ಮಣರು ಪರಶುರಾಮಕ್ಷೇತ್ರದಲ್ಲಿ ವಾಸ್ತವ್ಯಮಾಡಿಕೊಂಡಿದ್ದವರು. ನಂತರ ಅವರು ಜಮೀನುದಾರರಾಗಿ ಪರಿವರ್ತನೆಗೊಂಡರು.

ಕೊಯ್ಲುಹಬ್ಬಮತ್ತು ವಾಮನ ಜಯಂತಿಯನ್ನು ಒಟ್ಟಾಗಿ ಆಚರಿಸಿ ತಿರುಓಣಂ ಎಂದು ಕರೆದಿದ್ದಾರೆ ಎಂಬ ವಾದವನ್ನು ಆರೆಸ್ಸೆಸ್ ಎತ್ತಿ ಹಿಡಿದಿದೆ. ಕೇರಳೀಯರಿಗೆ ಗೊತ್ತಿಲ್ಲದ ಇಂತಹ ಕಥೆಗಳನ್ನು ಆರೆಸ್ಸೆಸ್ ಎಲ್ಲಿಂದ ತಂದಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಆರೆಸ್ಸೆಸ್ ಓಣಂನ ಚರಿತ್ರೆಯನ್ನು ಕೇರಳೀಯರಿಗೆ ತಪ್ಪಾಗಿ ಕಲಿಸಲಾಗಿದೆ ಎಂದು ಹೇಳುತ್ತಿದೆ. "ಮಹಾಬಲಿ ಅಹಂಕಾರಿಯಾಗಿದ್ದ. ಅದನ್ನು ಇಲ್ಲದಾಗಿಸಿಮೋಕ್ಷ ಕೊಡಿಸುವ ಉದ್ದೇಶದಿಂದ ವಾಮನನಾಗಿ ಬಂದು ವಿಷ್ಣು ಪಾತಾಳಕ್ಕೆ ಒತ್ತುವ ಕೆಲಸವನ್ನು ಮಾಡಿದ್ದಾನೆ. ಮಹಾಬಲಿ ಓಣಂನ ಅಧೀಶನಲ್ಲ. ಕೇರಳೀಯರು ವಾಮನ ಮೂರ್ತಿಯನ್ನು ಓಣಾಧೀಶನಾಗಿ ಆರಾಧಿಸುತ್ತಾರೆ. ಮಹಾಬಲಿ ಜೀವಿಸಿದ್ದಾಗ ಕೇರಳವೇ ಇರಲಿಲ್ಲ. ನರ್ಮದಾ ನದಿ ತೀರದ ಭೃಗುಕಚ್ಚ ಎಂಬ ತೀರ್ಥ ಭೂಮಿಯಲ್ಲಿ ಮಹಾಬಲಿ ಯಾಗ ನಡೆಸಿದ್ದಾನೆ. ಮಹಾಬಲಿಯ ಮಹಾ ಸಾಮ್ರಾಜ್ಯವಾಗಿದ್ದ ಭಾರತದಲ್ಲಿ ಇನ್ನೆಲ್ಲೂ ಇಲ್ಲದ ಓಣಂ ಆಚರಣೆ ಕೇರಳ ಮಾತ್ರದಲ್ಲಿ ಮಾತ್ರ ಹೇಗೆ ಬಂತು" ಎಂದು ಆರೆಸ್ಸೆಸ್ ಕೇರಳೀಯರನ್ನು ಪ್ರಶ್ನಿಸಿದೆ.

 "ಪರಶುರಾಮ ಕೊಡಲಿ ಎಸೆದು ಕೇರಳವನ್ನು ಸೃಷ್ಟಿಸಿದ ಎಂಬುದು ಕೇರಳಸೃಷ್ಟಿಗಿರುವ ಕಥೆಯಾಗಿದೆ. ಆದರೆ ವಿಷ್ಣು ವಾಮನಾವತಾರದ ಬಳಿಕವೇಪರಶುರಾಮ ಅವತಾರ ತಾಳಿದ್ದನು. ಹಾಗಿದ್ದರೆ ಕೇರಳ ಸೃಷ್ಟಿಯ ಮೊದಲೇ ಮಹಾಬಲಿ ಕೇರಳವನ್ನು ಆಳ್ವಿಕೆ ನಡೆಸುವುದು ಹೇಗೆ?" ಎಂದುಕೂಡಾ ಪ್ರಶ್ನೆ ಹಾಕಿದೆ. ಆರೆಸ್ಸೆಸ್ ಇಂತಹ ಪ್ರಚಾರ ಹೊಸದೇನಲ್ಲ. . ಎರಡು ವರ್ಷಗಳ ಹಿಂದೆಯೇ ಶಶಿಕಲಾ ಮತ್ತು ಶೋಭಾ ಸುರೇಂದ್ರನ್ ಈ ಪ್ರಶ್ನೆಯೊಂದಿಗೆ ರಂಗಪ್ರವೇಶಿಸಿದ್ದರು. ಈಗ ಆರೆಸ್ಸೆಸ್ ತನ್ನ ಮುಖವಾಣಿ ಕೇಸರಿಮೂಲಕ ಓಣಂನ್ನು ಪ್ರಶ್ನಿಸಿದೆ ಮತ್ತು ಓಣಂನ್ನು ವಾಮನ ಜಯಂತಿಯಾಗಿ ಆಚರಿಸಬೇಕೆಂದು ಘೋಷಿಸಿಬಿಟ್ಟಿದೆ. ಈ ಮೂಲಕ ಕೇರಳದಲ್ಲಿ ವಿವಾದದ ಕಿಡಿ ಹುಟ್ಟಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಡ ಪಕ್ಷಗಳು "ಆರೆಸ್ಸೆಸ್ ಓಣಂನ್ನು ಸವರ್ಣೀಯರ ಆಚರಣೆ ಮಾತ್ರ ಮಾಡಲು ಅದುಯತ್ನಿಸುತ್ತಿದೆ "ಎಂದುಆರೋಪಿಸಿವೆ. ಸಿಪಿಐಎಂ, "ದೇಶಾದ್ಯಂತ ಸಂಘಪರಿವಾರ ಸಂಘಟನೆಗಳು ನಡೆಸುತ್ತಿರುವ ಸವರ್ಣೀಯ ಮೇಲ್ಮೆಗಾಗಿನ ಹೋರಾಟವನ್ನು ಕೇರಳಕ್ಕೂ ತರುವ ಯತ್ನ ಇದು" ಎಂದು ಆರೋಪಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News