×
Ad

ಒಂದೇ ಚಿತ್ರದಲ್ಲಿ ಆಮಿರ್-ಅಮಿತಾಭ್

Update: 2016-09-11 15:59 IST

ಬಾಲಿವುಡ್ ಸಿನೆಮಾ ಪ್ರೇಮಿಗಳಿಗೊಂದು ಸಿಹಿ ಸುದ್ದಿ. ಬಾಲಿವುಡ್‌ನ ಮಹಾನ್ ತಾರೆಯರಾದ ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್, ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಸಿಕರನ್ನು ರೋಮಾಂಚನ ಗೊಳಿಸಲಿದ್ದಾರೆ. ಹೌದು. ‘ಥಗ್ಸ್ ಆಫ್ ಹಿಂದೂಸ್ಥಾನ್’ ಎಂದು ಹೆಸರಿಡಲಾದ ಚಿತ್ರದಲ್ಲಿ ಈ ಇಬ್ಬರು ಖ್ಯಾತ ನಟರು ಜೊತೆಯಾಗಿ ನಟಿಸಲಿದ್ದಾರೆ. ಈ ವಿಷಯವನ್ನು ಆಮಿರ್‌ಖಾನ್ ಅವರೇ ಖುದ್ದಾಗಿ ಟ್ವಿಟರ್‌ನಲ್ಲಿ ದೃಢಪಡಿಸಿದ್ದಾರೆ. ‘ ಮೇರು ನಟ ಅಮಿತಾಭ್ ಜೊತೆ ಅಭಿನಯಿಸುವ ಕಾಲ ಈಗ ಬಂದಿದೆ. ಜೀವನವಿಡೀ ನಾನು ಮೆಚ್ಚಿರುವ ಈ ನಟನ ಜೊತೆ ಅಭಿನಯಿಸಲು ನನಗೆ ಥ್ರಿಲ್ ಆಗುತ್ತಿದೆ’’ ಎಂದವರು ಟ್ವೀಟ್ ಮಾಡಿದ್ದಾರೆ.

1839ರಲ್ಲಿ ಪ್ರಕಟವಾದ, ಫಿಲಿಪ್ಸ್ ಮೆಡೊಸ್ ಟೇಲರ್ ಅವರ ‘ಕನ್‌ಫೆಶನ್ಸ್ ಆಫ್ ಎ ಥಗ್’ ಆಂಗ್ಲ ಕಾದಂಬರಿಯನ್ನು ಈ ಚಿತ್ರವು ಆಧರಿಸಿದೆ. 1932ನೆ ಇಸವಿಯ ಭಾರತದಲ್ಲಿ ನಡೆಯುವ ಅಪರಾಧ ಹಾಗೂ ಪ್ರತೀಕಾರದ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ಹಣ ಹಾಗೂ ಬೆಲೆಬಾಳುವ ವಸ್ತುಗಳಿಗಾಗಿ ಪ್ರಯಾಣಿಕರನ್ನು ಬರ್ಬರವಾಗಿ ಕೊಲ್ಲುವ ಪಿಂಡಾರಿಗಳೆಂಬ ನಿರ್ದಯಿ ದರೋಡೆಕೋರರ ಬದುಕಿನ ಬಗ್ಗೆ ಈ ಚಿತ್ರವು ಬೆಳಕು ಚೆಲ್ಲಲಿದೆ. ಆದರೆ ಈ ಚಿತ್ರದ ಬಿಡುಗಡೆಗೆ ಇನ್ನೂ ಎರಡು ವರ್ಷ ಕಾಯಬೇಕಿದೆ. ಮುಂದಿನ ವರ್ಷ ಚಿತ್ರ ಸೆಟ್ಟೇರಲಿದ್ದು, 2018ರ ದೀಪಾವಳಿಗೆ ತೆರೆಕಾಣಲಿದೆಯೆಂದು ಆಮಿರ್‌ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News