×
Ad

ಫವಾದ್ ಚಿತ್ರಕ್ಕೆ ಕತ್ರೀನಾ ನಾಯಕಿ

Update: 2016-09-11 16:04 IST

‘ಖೂಬ್‌ಸೂರತ್’, ‘ಕಪೂರ್ ಆ್ಯಂಡ್ ಸನ್ಸ್’ ಚಿತ್ರಗಳ ಮೂಲಕ ಬಾಲಿವುಡ್ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿರುವ, ಪಾಕ್ ನಟ, ಫವಾದ್ ಖಾನ್ ಹಾಗೂ ಮೋಹಕ ನಟಿ ಕತ್ರೀನಾ ಕೈಫ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿದ್ದಾರೆ. ‘ಸೂಫಿ’ ಎಂದು ಹೆಸರಿಡಲಾದ ಈ ಬಿಗ್‌ಬಜೆಟ್ ಚಿತ್ರಕ್ಕೆ ಆದಿತ್ಯಧರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್‌ಜೋಹರ್‌ರ ‘ಧರ್ಮಪ್ರೊಡಕ್ಷನ್’್ಸ ಈ ಚಿತ್ರವನ್ನು ನಿರ್ಮಿಸಲಿದೆ. ಆದಿತ್ಯಧರ್ ಈ ಮೊದಲು ಕೆಲವು ಬಾಲಿವುಡ್ ಚಿತ್ರಗಳಿಗೆ ಸಾಹಿತಿ ಹಾಗೂ ಗೀತರಚನೆಕಾರರಾಗಿ ಕೆಲಸ ಮಾಡಿದ್ದು, ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶನದ ಹೊಣೆ ವಹಿಸಿದ್ದಾರೆ.

 ಕಳೆದ ವರ್ಷ ಚಿತ್ರಾಂಗದಾ ಸಿಂಗ್ ಹಾಗೂ ಪ್ರತೀಕ್ ಬಬ್ಬರ್ ಅವರನ್ನು ಮುಖ್ಯ ಪಾತ್ರಗಳಲ್ಲಿ ಹಾಕಿಕೊಂಡು ಈ ಸಿನೆಮಾವನ್ನು ನಿರ್ಮಿಸುವ ಯೋಜನೆಯನ್ನು ಆದಿತ್ಯ ಹೊಂದಿದ್ದರು. ಆದರೆ, ಕಾರಣಾಂತರಗಳಿಂದ ಅದನ್ನು ಕೈಬಿಡಲಾಗಿತ್ತು. ಅಂದಹಾಗೆ ದೀಪಾವಳಿಗೆ ತೆರೆಕಾಣಲಿರುವ ಕರಣ್ ಜೋಹರ್ ನಿರ್ದೇಶನದ ‘ಯೆ ದಿಲ್ ಮುಷ್ಕಿಲ್’ ಚಿತ್ರದಲ್ಲಿಯೂ ಫವಾದ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

 ಪಂಜಾಬಿ ಸಮುದಾಯದ ಮದುವೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿರುವ ಈ ಚಿತ್ರದ ಶೂಟಿಂಗ್ ದಿಲ್ಲಿ ಹಾಗೂ ವಿದೇಶಗಳಲ್ಲಿ ನಡೆಯಲಿದೆ. ಕತ್ರೀನಾ ಕೈಫ್ ಸದ್ಯಕ್ಕೆ ‘ಬಾರ್ ಬಾರ್ ದೇಖೋ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದರೆ, ಫವಾದ್ ‘ಯೆ ದಿಲ್ ಮುಷ್ಕಿಲ್’ ಚಿತ್ರದ ಯಶಸ್ಸಿನ ಬಗ್ಗೆ ಆತ್ಮವಿಶ್ವಾಸವಿಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಅಭಿನಯದ ಚಿತ್ರವು ಮುಂದಿನ ವರ್ಷದ ವೇಳೆಗೆ ಶೂಟಿಂಗ್ ಆರಂಭಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News