×
Ad

ಹುತಾತ್ಮ ವಕ್ಕಂ ಖಾದರ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಪಿಣರಾಯಿ

Update: 2016-09-11 16:59 IST

ತಿರವನಂತಪುರಂ, ಸೆ.11: ಅಪ್ರತಿಮ ಸ್ವಾತಂತ್ರ ಹೋರಾಟಗಾರ ವಕ್ಕಂ ಖಾದರ್‌ರ ಸ್ಮಾರಕವನ್ನು ನಿರ್ಮಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಅವರು ವಕ್ಕಂ ಖಾದರ್ ಹುತಾತ್ಮ ದಿನದ ಅಂಗವಾಗಿ ನಡೆದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ವಕ್ಕಂ ಖಾದರ್‌ರಂತಹ ಸ್ವಾತಂತ್ರ್ಯ ಸಮರ ಸೇನಾನಿಗಳು ಬ್ರಿಟಿಷ್ ಸಾಮ್ರಾಜ್ಯದ ನೇಣಿನ ಕುಣಿಕೆಯ ಮುಂದೆ ಧೈರ್ಯವಾಗಿ ನಿಂತು ದೇಶಕ್ಕಾಗಿ ಪ್ರಾಣಾರ್ಪಣೆಗೈದಿದ್ದಾರೆ. ಆದರೆ ಸ್ವಯಂಘೋಷಿತ ದೇಶಪ್ರೇಮಿಗಳಾಗಿ ನಟನೆ ಮಾಡುವವರಲ್ಲಿ ಕೆಲವರು ಬ್ರಿಟಿಷರ ಬಳಿ ಕ್ಷಮೆ ಕೇಳಿ ಜೀವ ಉಳಿಸಿಕೊಂಡವರು ಆಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
 
ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ಹಕ್ಕುಗಳೆಲ್ಲವೂ ಒಂದು ದಿನದಲ್ಲಿ ಸಿಕ್ಕಿದ್ದಲ್ಲ. ಬಹುದೊಡ್ಡ ವಿರೋಧ ಎದುರಿಸಿ, ತ್ಯಾಗ, ಬಲಿದಾನಗಳ ಪರಿಣಾಮವಾಗಿ ಇಂದು ನಾವು ಈ ನೆಲೆಗೆ ಬಂದಿದ್ದೇವೆ. ಈ ವಿಷಯಗಳನ್ನು ಮರೆಸುವಂತಹ ವಿಚಾರಗಳು ಇಂದು ಕೆಲವು ಕೇಂದ್ರಗಳಿಂದ ಕೇಳಿ ಬರುತ್ತಿವೆ. ಭಗತ್‌ಸಿಂಗ್‌ರ ಜೀವನದಲ್ಲಿ ಸಂಭವಿಸಿದಂತಹ ಘಟನೆಗಳು ಐಎನ್‌ಎ ಹೀರೊ ವಕ್ಕಂ ಖಾದರ್‌ರ ಜೀವನದಲ್ಲಿಯೂ ಸಂಭವಿಸಿದೆ. ಹೊಸತಲೆಮಾರು ಕಡ್ಡಾಯವಾಗಿ ಅರಿತಿರಬೇಕಾದ ಇತಿಹಾಸಪುರುಷ ವಕ್ಕಂ ಖಾದರ್ ಆಗಿದ್ದಾರೆ. ವಕ್ಕಂ ಖಾದರ್ ಸ್ಮಾರಕ ನಿರ್ಮಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಎಂ.ಎಂ. ಹಸನ್ ಅಧ್ಯಕ್ಷತೆ ವಹಿಸಿದ್ದರು. ಆನತ್ತಲಟ್ಟ ಆನಂದನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೈಲಜಾ ಬೇಗಂ, ಎಂ.ಎಸ್. ಪೈಝಲ್‌ಖಾನ್, ಇ.ಎಂ. ನಜೀಬ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂ.ಎಂ. ಇಕ್ಬಾಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News