×
Ad

ಜಿಯೋ ಜಾಹೀರಾತಿನಲ್ಲಿ ಪ್ರಧಾನಿ: ಸಮರ್ಥಿಸಿದ ದೂರಸಂಪರ್ಕ ಸಚಿವ ಸಿನ್ಹಾ

Update: 2016-09-12 00:03 IST

ಹೊಸದಿಲ್ಲಿ, ಸೆ.11: ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನೊಳಗೊಂಡ ರಿಲಯನ್ಸ್ ಜಿಯೋ ಜಾಹೀರಾತುಗಳ ಕುರಿತ ಟೀಕೆಗಳನ್ನು ಇಂದಿಲ್ಲಿ ತಳ್ಳಿಹಾಕಿದ ಕೇಂದ್ರ ದೂರ ಸಂಪರ್ಕ ಸಚಿವ ಮನೋಜ ಸಿನ್ಹಾ, ಡಿಜಿಟಲ್ ಸಂಪರ್ಕ ಸೌಲಭ್ಯವನ್ನು ಒದಗಿಸುವ ಪ್ರಧಾನಿಯವರ ಕನಸನ್ನು ಯಾರೇ ಆದರೂ ನನಸಾಗಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.

ಉಚಿತ ಕರೆಗಳು ಮತ್ತು ಕಡಿಮೆ ದರಗಳಲ್ಲಿ ಡೇಟಾ ಕೊಡುಗೆಯೊಂದಿಗೆ ರಿಲಯನ್ಸ್ ಜಿಯೋ ಹುಟ್ಟುಹಾಕಿರುವ ದರ ಸಮರ ಆರೋಗ್ಯಕರ ಸ್ಪರ್ಧೆಯಾಗಿದೆ ಮತ್ತು ಅದು ಅಂತಿಮವಾಗಿ ಬಳಕೆದಾರರಿಗೆ ಲಾಭದಾಯಕವಾಗಲಿದೆ ಎಂದರು.

ದೂರಸಂಪರ್ಕ ಕ್ಷೇತ್ರದ ನಿಯಂತ್ರಣ ಪ್ರಾಧಿಕಾರವಾಗಿರುವ ಟ್ರಾಯ್ ಪಕ್ಷಪಾತದ ಧೋರಣೆಯನ್ನು ಹೊಂದಿದೆ ಎಂಬ ದೂರಸಂಪರ್ಕ ಕಂಪೆನಿಗಳ ಆರೋಪವನ್ನು ತಿರಸ್ಕರಿಸಿದ ಸಿನ್ಹಾ, ಟ್ರಾಯ್ ಯಾರದೇ ಪರವಾಗಿ ಒಲವು ವ್ಯಕ್ತಪಡಿಸಿ ಕೈಗೊಂಡಿರುವ ಒಂದೇ ಒಂದು ನಿರ್ಧಾರವನ್ನು ತನಗೆ ತೋರಿಸುವಂತೆ ಹೇಳಿದರು.

ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿಯವರು ಚಾಲನೆ ನೀಡಿದ್ದಾಗ ದೇಶದಲ್ಲಿ ಡಿಜಿಟಲ್ ಸಂಪರ್ಕದ ಕೊರತೆಯನ್ನು ನಿವಾರಿಸುವುದು ಅವರ ಉದ್ದೇಶವಾಗಿತ್ತು. ಯಾರಾದರೂ ದೊಡ್ಡ ಪ್ರಮಾಣದಲ್ಲಿ ಜನರಿಗೆ ಡಿಜಿಟಲ್ ಸಂಪರ್ಕ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ ಎಂದರೆ ಒಂದು ರೀತಿಯಲ್ಲಿ ಅವರು ಪ್ರಧಾನಿಯವರ ಕನಸನ್ನು ನನಸಾಗಿಸುತ್ತಿದ್ದಾರೆ. ಇದು ಆಕ್ಷೇಪಣೀಯವೆಂದು ತನಗನ್ನಿಸುವುದಿಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News