×
Ad

ಕೇಂದ್ರದ 32 ಇಲಾಖೆಗಳಲ್ಲಿ ಇ-ಆಫೀಸ್ ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ: ವರದಿ

Update: 2016-09-12 00:03 IST

ಹೊಸದಿಲ್ಲಿ, ಸೆ.11: ಇಂಟೆಲಿಜೆನ್ಸ್ ಬ್ಯೂರೊ(ಐಬಿ), ಸಿಬಿಐ ಹಾಗೂ ಎನ್‌ಐಎ ಸಹಿತ 32 ಕೇಂದ್ರೀಯ ಪೊಲೀಸ್ ಸಂಘಟನೆಗಳು ಇನ್ನೂ ಇ-ಆಫೀಸ್ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ.

ಅವುಗಳಲ್ಲದೆ, ಸಿಐಎಸ್‌ಎಫ್ ಹಾಗೂ ಎನ್‌ಎಸ್‌ಜಿ ಸಹಿತ 8 ಅರೆಸೈನಿಕ ಪಡೆಗಳೂ, ತಮ್ಮ ಕೆಲಸಗಳನ್ನು ಡಿಜಿಟಲೈಸ್ ಮಾಡುವ ಉದ್ದೇಶದ ಈ ಯೋಜನೆಯನ್ನು ಇನ್ನಷ್ಟೇ ಜಾರಿಗೊಳಿಸಬೇಕಿದೆ.

ಇ-ಆಡಳಿತದ ಕುರಿತು ಗುರುವಾರ ನಡೆದಿದ್ದ ಸಮ್ಮೇಳನವೊಂದರಲ್ಲಿ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ದೂರುಗಳ ಇಲಾಖೆಯು(ಡಿಎಆರ್‌ಪಿಜಿ) ಇ-ಆಫೀಸ್ ಯೋಜನೆ ಅನುಷ್ಠಾನದ ಸ್ಥಿತಿಗತಿಯ ಕುರಿತು ವರದಿಯೊಂದನ್ನು ಮಂಡಿಸಿತ್ತು. ಕಾರ್ಯಕ್ರಮದಲ್ಲಿ ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್, ಹಿರಿಯ ಅಧಿಕಾರಿಗಳು ಹಾಗೂ 172 ಮಂದಿ ಹೊಸದಾಗಿ ನಿಯೋಜನೆಗೊಂಡಿರುವ ಐಎಎಸ್ ಅಧಿಕಾರಿಗಳು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಎಲ್ಲ ಸಚಿವಾಲಯಗಳ ಇ-ಆಡಳಿತ ಅಥವಾ ಕಚೇರಿಗಳ ಕಂಪ್ಯೂಟರೀಕರಣ ಕುರಿತು ಸ್ಥಿತಿಗತಿಯ ವಿವರವನ್ನು ನೀಡಲಾಗಿತ್ತು.

 ಐಬಿ, ಸಿಬಿಐ, ಎನ್‌ಐಎ, ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯೂರೊ, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ, ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿ ಹೈದರಾಬಾದ್, ಈಶಾನ್ಯ ಪೊಲೀಸ್ ಅಕಾಡಮಿ, ಶಿಲ್ಲಾಂಗ್ ಹಾಗೂ ರಾಷ್ಟ್ರೀಯ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಸಂಸ್ಥೆ ಸಹಿತ 8 ಕೇಂದ್ರೀಯ ಪೊಲೀಸ್ ಸಂಘಟನೆಗಳು, ಸಿಐಎಸ್‌ಎಫ್, ಎನ್‌ಎಸ್‌ಜಿ, ಅಸ್ಸಾಂ ರೈಫಲ್ಸ್, ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಹಾಗೂ ಸಹಸ್ರ ಸೀಮಾ ಬಲದಂತಹ 7 ಕೇಂದ್ರೀಯ ಸಶಸ್ತ್ರ ಪಡೆಗಳು ಈ ವರೆಗೆ ಇ-ಆಫೀಸ್ ಯೋಜನೆ ಅನುಷ್ಠಾನಿಸಿಲ್ಲ.

ತೈಲ ಮತ್ತು ನೈಸರ್ಗಿಕ ಅನಿಲ, ಸಾಂಸ್ಥಿಕ ವ್ಯವಹಾರ, ಆಯುಷ್ ಹಾಗೂ ಹೊಸದಾಗಿ ಸೃಷ್ಟಿಸಲಾಗಿರುವ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯಗಳು, ರಕ್ಷಣೆ, ಡಿಆರ್‌ಡಿಒ, ಮಾಜಿ ಸೈನಿಕರ ಕಲ್ಯಾಣ, ಕೈಗಾರಿಕಾ ನೀತಿ ಮತ್ತು ಭಡ್ತಿ, ಅಂಚೆ ಹಾಗೂ ಶಾಸಕಾಂಗ ಇಲಾಖೆಗಳು, ಹವಾಮಾನ, ಬಾಹ್ಯಾಕಾಶ, ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನೆ, ಕೃಷಿ ಸಂಶೋಧನೆ ಮತ್ತು ಶಿಕ್ಷಣ, ಅಣು ಶಕ್ತಿ, ಜೈವಿಕ ತಂತ್ರಜ್ಞಾನ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆಗಳಲ್ಲೂ ಅದು ಇನ್ನಷ್ಟೇ ಆಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News