×
Ad

ಟಾಲ್ಗೊ ರೈಲು ಪರೀಕ್ಷೆ ಯಶಸ್ವಿ

Update: 2016-09-12 00:05 IST

ಹೊಸದಿಲ್ಲಿ, ಸೆ.11: ಸ್ಪಾನಿಶ್ ಟಾಲ್ಗೊ ರೈಲು ದಿಲ್ಲಿ-ಮುಂಬೈ ನಡುವಣ ಅಂತಿಮ ಪರೀಕ್ಷಾ ಪ್ರಯಾಣವನ್ನಿಂದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅದು 12 ತಾಸಿಗೂ ಕಡಿಮೆ ಅವಧಿಯಲ್ಲಿ ಪ್ರಯಾಣ ಮುಗಿಸುವ ತನ್ನ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ.

ನಿನ್ನೆ ಅಪರಾಹ್ನ 2:45ಕ್ಕೆ ದಿಲ್ಲಿಯಿಂದ ಹೊರಟ ರೈಲು ಇಂದು ಮುಂಜಾನೆ 2:34ಕ್ಕೆ ಮುಂಬೈ ತಲುಪಿದೆ.

ದಿಲ್ಲಿ-ಮುಂಬೈ ನಡುವಣ ಪ್ರಯಾಣ ಸಮಯವನ್ನು ಕನಿಷ್ಠ 4 ತಾಸುಗಳಷ್ಟಾದರೂ ಕಡಿಮೆಗೊಳಿಸಬೇಕೆಂಬುದು ಭಾರತೀಯ ರೈಲ್ವೆಯ ಬಯಕೆಯಾಗಿದೆ. ಇದಕ್ಕಾಗಿ ಸೂಪರ್‌ಫಾಸ್ಟ್ ಟಾಲ್ಗೊ ರೈಲಿನ ಪ್ರಾಯೋಗಿಕ ಓಟವನ್ನು ನಡೆಸಲಾಗಿದೆ. ತಾಸಿಗೆ 200 ಕಿ.ಮೀ. ವೇಗದಲ್ಲಿ ಸಾಗಬಲ್ಲ ಸ್ಪೇನ್‌ನ ಟಾಲ್ಗೊ ನಿರ್ಮಿತ 9 ಭಾರೀ ಹಗುರ ಬೋಗಿಗಳನ್ನು ಈ ಪರೀಕ್ಷೆಗಾಗಿ ಎಪ್ರಿಲ್‌ನಲ್ಲಿ ಮುಂಬೈಗೆ ಆಮದು ಮಾಡಲಾಗಿತ್ತು.

ಟಾಲ್ಗೊ ರೈಲಿನಲ್ಲಿ 2 ಎಕ್ಸಿಕ್ಯೂಟಿವ್ ದರ್ಜೆಯ ಬೋಗಿ, 4 ಚೆಯರ್ ಕಾರ್, ಒಂದು ಕೆಫೆಟೇರಿಯ, ಒಂದು ಯಂತ್ರ ಬೋಗಿ ಹಾಗೂ ಸಿಬ್ಬಂದಿ ಮತ್ತು ಉಪಕರಣಗಳಿಗಾಗಿ ಒಂದು ಕೊನೆಯ ಬೋಗಿ ಇರುತ್ತವೆ.

ದಿಲ್ಲಿ-ಮುಂಬೈ ನಡುವಿನ ಹಳಿಗಳ ಉದ್ದ 1,400 ಕಿ.ಮೀ. ಪ್ರಕೃತ ರಾಜಧಾನಿ ಎಕ್ಸ್‌ಪ್ರೆಸ್ ಈ ದೂರವನ್ನು 16 ತಾಸುಗಳಲ್ಲಿ ಕ್ರಮಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News