×
Ad

ರಾಜಕೀಯ ಕಾರಣಗಳಿಂದಾಗಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ: ಆರೆಸ್ಸೆಸ್

Update: 2016-09-13 16:14 IST

ಹೊಸದಿಲ್ಲಿ, ಸೆಪ್ಟಂಬರ್ 13: ಆರೆಸ್ಸೆಸ್ ಪ್ರಮುಖ್ ಮೋಹನ್‌ ಭಾಗ್ವತ್ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ರಾಜಕೀಯ ಕಾರಣಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. "ಹಿಂದೂ ಮುಸ್ಲಿಮ್ ರಾಜಕೀಯದ ಕಾರಣದಿಂದಾಗಿ ಕಲಹವಾಗುತ್ತಿದೆಯೇ ಹೊರತು ಧರ್ಮಗಳ ಕಾರಣದಿಂದಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಿರುವುದಕ್ಕೆ ರಾಜಕೀಯವೇ ಕಾರಣವಾಗಿದೆ" ಎಂದು ಅವರು ಹೇಳಿದ್ದಾರೆ.

ವರದಿಯಾಗಿರುವ ಪ್ರಕಾರ "ಹಿಂದೂಗಳಿಗೆ ಭಗವಾನ್ ರಾಮ್‌ನಂತೆ ಬೇರೆ ಯಾರೂ ಇಲ್ಲ. ಅಡ್ಡವಾಗಿರುವ ರಾಜಕೀಯ ತೆರವುಗೊಂಡರೆ ರಾಮಮಂದಿರ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ" ಎಂದು ಮೋಹನ್ ಭಾಗ್ವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ಸಂತಗುಲಾಬ್‌ರಾವ್‌ಜಿ ಮಹಾರಾಜ್ ಜೀವನ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಆರೆಸ್ಸೆಸ್ ದೃಢವಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ಬದಲಾಗಿ ವಿಶ್ವಧರ್ಮೀಯ ಮಾನವತಾ ಭವನ ನಿರ್ಮಿಸಬೇಕೆಂಬ ಬೇಡಿಕೆಯನ್ನು ಅದು ಒಪ್ಪಲು ಸಿದ್ಧವಿಲ್ಲ ಎನ್ನಲಾಗಿದೆ. " ಹಿಂದೂಗಳ ದೇಶದಲ್ಲಿ ಮಂದಿರ ರಾಮಜನ್ಮಭೂಮಿಯಲ್ಲೇ ಆಗಬೇಕು. ಇದರಲ್ಲಿ ಯಾರನ್ನು ಕೀಳಾಗಿಸುವ ಪ್ರಶ್ನೆಯೇ ಇಲ್ಲ" ಎಂದು ಭಾಗ್ವತ್ ಹೇಳಿದ್ದಾರೆ.

"ಹಿಂದೂವೊಬ್ಬ ಹೆಮ್ಮೆಯಿಂದಲೆ ತಾನು ಹಿಂದೂ ಎಂದು ಹೇಳುತ್ತಾನೆ. ಆದರೆ ಕೆಲವರು ತಮ್ಮನ್ನು ಹಿಂದೂ ಎಂದು ಹೇಳಲು ಹಿಂಜರಿಯುತ್ತಾರೆ. ಅವರಲ್ಲಿರುವ ಕೀಳರಿಮೆ ಹೋಗಲಾಡಿಸಲು ಉಳಿದ ಹಿಂದೂಗಳು ಎದ್ದು ನಿಲ್ಲಬೇಕಾಗುತ್ತದೆ" ಎಂದು ಭಾಗ್ವತ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಮಜನ್ಮಭೂಮಿ ನ್ಯಾಸದ ಹಿರಿಯ ಸದಸ್ಯ ರಾಮವಿಲಾಸ್ ವೇದಾಂತಿ " ಪ್ರಧಾನಿ ನರೇಂದ್ರಮೋದಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿಸಲು ಮೋಹನ್ ಭಾಗ್ವತ್‌ಗೆ ಆದೇಶ ನೀಡಬೇಕೆಂದು ಹೇಳಿಕೊಂಡಿದ್ದಾರೆ. " "ಅಗತ್ಯವೆಂದಾದರೆ ಸಂಸತ್‌ನ ಎರಡು ಸದನಗಳ ಜಂಟಿ ಸಭೆಯನ್ನು ಕರೆಯಬೇಕು.ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾದರೆ ದೇಶದ ಗೌರವ ಹೆಚ್ಚಾಗಲಿದೆ" ಎಂಬುದು ವೇದಾಂತಿ ಅವರ ಅಭಿಪ್ರಾಯವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News