ಕಾಂಗ್ರೆಸ್ ಶಾಸಕನಿಂದ ಪಂಜಾಬ್ ಸಚಿವನ ಮೇಲೆ ಶೂ ಎಸೆತ!
ಚಂಡಿಗಡ, ಸೆ.14: ಕಾಂಗ್ರೆಸ್ ಶಾಸಕರೊಬ್ಬರು ಪಂಜಾಬ್ ವಿಧಾನಸಭೆಯಲ್ಲಿ ರಾಜ್ಯದ ಸಚಿವರೊಬ್ಬರತ್ತ ಶೂ ಎಸೆದು ಯಾವುದೇ ವಿಧಾನಸಭೆಯಲ್ಲೂ ಸಂಭವಿಸಿರದ ಕೀಳು ಕೆಲಸವೊಂದನ್ನು ಬುಧವಾರ ಮಾಡಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆಯೊಂದನ್ನು ನಡೆಸುವ ವೇಳೆ, ಪಕ್ಷದ ಶಾಸಕ ತಾರ್ಲೋಚನ್ ಸಿಂಗ್ ಸೂಂಧ್, ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾರ ಮೇಲೆ ತನ್ನ ಶೂ ಎಸೆದಿದ್ದಾರೆ.
ಪಂಜಾಬ್‌ನ ಅಕಾಲಿದಳ-ಬಿಜೆಪಿ ಸರಕಾರದ ವಿರುದ್ಧ ತಮ್ಮ ಅವಿಶ್ವಾಸ ಗೊತ್ತುವಳಿಯ ಬಗ್ಗೆ ಚರ್ಚೆಯೊಂದಕ್ಕೆ ಆಗ್ರಹಿಸಿ ಸೂಂಧ್ ಹಾಗೂ ಇತರ ಕಾಂಗ್ರೆಸ್ ಶಾಸಕರು ವಿಧಾನಸಭಾಧ್ಯಕ್ಷರ ಪೀಠದ ಸುತ್ತ ಗುಂಪುಗೂಡಿದ್ದರು.
ಸರಕಾರವು ದಿನದ ಕಲಾಪವನ್ನು ಮುಂದುವರಿಸಿರುವಂತೆಯೇ ಅವರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಈ ವೇಳೆ ಉದ್ರಿಕ್ತರಾದ ಸೂಂಧ್, ತನ್ನ ಶೂ ಕಳಚಿ ಕಂದಾಯ ಸಚಿವ ಮಜಿಥಿಯಾರತ್ತ ಎಸೆದರು.
ಅವಿಶ್ವಾಸ ಗೊತ್ತುವಳಿ ಸೋಮವಾರ ಧ್ವನಿ ಮತದಿಂದ ತಿರಸ್ಕೃತವಾದ ಬಳಿಕ 22 ಮಂದಿ ಕಾಂಗ್ರೆಸ್ ಶಾಸಕರು ಸದನದಿಂದ ಹೊರ ಹೋಗಿರಲಿಲ್ಲ.