ಟ್ರಂಪ್ ಫೌಂಡೇಶನ್ ವಿರುದ್ಧ ನ್ಯೂಯಾರ್ಕ್ ಅಟಾರ್ನಿ ಜನರಲ್ ತನಿಖೆ
ವಾಶಿಂಗ್ಟನ್, ಸೆ. 14: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ದತ್ತಿ ಸಂಸ್ಥೆ ‘ಡೊನಾಲ್ಡ್ ಜೆ ಟ್ರಂಪ್ ಫೌಂಡೇಶನ್’ ‘‘ಅವ್ಯವಹಾರ’’ದಲ್ಲಿ ಭಾಗಿಯಾಗಿರುವ ಆರೋಪಗಳ ಹಿನ್ನೆಲೆಯಲ್ಲಿ, ಅದರ ಬಗ್ಗೆ ತನಿಖೆಯೊಂದನ್ನು ಆರಂಭಿಸಿರುವುದಾಗಿ ನ್ಯೂಯಾರ್ಕ್ ರಾಜ್ಯದ ಉನ್ನತ ಕಾನೂನು ಅನುಷ್ಠಾನ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
‘‘ನ್ಯೂಯಾರ್ಕ್ ರಾಜ್ಯದಲ್ಲಿರುವ ಲಾಭರಹಿತ ಸಂಸ್ಥೆಗಳ ನಿಯಂತ್ರಕನ ನೆಲೆಯಲ್ಲಿ ನಾನು ಈ ತನಿಖೆ ನಡೆಸುತ್ತಿದ್ದೇನೆ’’ ಎಂದು ಅಟಾರ್ನಿ ಜನರಲ್ ಎರಿಕ್ ಶ್ನೈಡರ್‌ಮ್ಯಾನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
‘‘ಟ್ರಂಪ್ ಫೌಂಡೇಶನ್ ಅವ್ಯವಹಾರದಲ್ಲಿ ನಿರತವಾಗಿದೆ ಎಂಬ ಕಳವಳವನ್ನು ನಾವು ಹೊಂದಿದ್ದೇವೆ’’ ಎಂದು ಶ್ನೈಡರ್‌ಮ್ಯಾನ್ ಹೇಳಿದರು. ಟ್ರಂಪ್ ವಿಶ್ವವಿದ್ಯಾನಿಲಯ ಎಂಬ ರಿಯಲ್ ಎಸ್ಟೇಟ್ ಕಾರ್ಯಕ್ರಮದ ವಿಷಯದಲ್ಲಿ ಶ್ನೈಡರ್‌ಮ್ಯಾನ್ ಬಿಲಿಯಾಧೀಶ ರಿಯಲ್ ಎಸ್ಟೇಟ್ ವ್ಯಾಪಾರಿಯ ವಿರುದ್ಧ ಹಲವು ವರ್ಷಗಳ ಕಾಲ ತನಿಖೆ ನಡೆಸಿದ್ದರು. ಟ್ರಂಪ್ ವಿಶ್ವವಿದ್ಯಾನಿಲಯ ಸಾರಾಸಗಟು ವಂಚನೆ ಎಂಬುದಾಗಿ ಅವರು ಬಣ್ಣಿಸಿದ್ದರು.
ಶ್ವೇತಭವನದ ಆಕಾಂಕ್ಷಿ 2008ರಿಂದ ತನ್ನದೇ ದತ್ತಿ ಸಂಸ್ಥೆಗೆ ಯಾವುದೇ ದೇಣಿಗೆ ನೀಡಿಲ್ಲ ಎಂಬುದಾಗಿ ‘ವಾಶಿಂಗ್ಟನ್ ಪೋಸ್ಟ್’ ಕಳೆದ ವಾರಾಂತ್ಯದಲ್ಲಿ ವರದಿ ಮಾಡಿತ್ತು.
ಆರು ಅಡಿ ಎತ್ತರದ ತನ್ನದೇ ಚಿತ್ರವನ್ನು ಖರೀದಿಸಲು ದತ್ತಿ ಉದ್ದೇಶಗಳಿಗಾಗಿ ಮೀಸಲಾಗಿಟ್ಟಿದ್ದ ಹಣದಿಂದ ಟ್ರಂಪ್ 20,000 ಡಾಲರ್ ಖರ್ಚು ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.