×
Ad

ಸೌಮ್ಯ ಹತ್ಯೆ ಪ್ರಕರಣ: ಗೋವಿಂದಚಾಮಿಯ ಗಲ್ಲುಶಿಕ್ಷೆ ರದ್ದು

Update: 2016-09-15 15:28 IST

ಹೊಸದಿಲ್ಲಿ, ಸೆ.15: ಸೌಮ್ಯ ಕೊಲೆಪ್ರಕರಣದ ಆರೋಪಿ ಗೋವಿಂದಚಾಮಿಯ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟು ರದ್ದುಪಡಿಸಿದೆ ಎಂದು ವರದಿಯಾಗಿದೆ. ಸೌಮ್ಯಳನ್ನು ಅತ್ಯಾಚಾರವೆಸಗಿದ್ದಕ್ಕಾಗಿ ಗೋವಿಂದಚಾಮಿಗೆ ಏಳುವರ್ಷ ಕಠಿಣ ಶಿಕ್ಷೆ ಮಾತ್ರ ವಿಧಿಸಲಾಗಿದೆ. ಈ ಹಿಂದೆ ಗೋವಿಂದಚಾಮಿಗೆ ತೃಶೂರ್ ತ್ವರಿತ ವಿಚಾರಣಾಕೋರ್ಟು ಗಲ್ಲುಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟಿಗೆ ಅಫೀಲು ಹೋಗಿದ್ದ. ವಿಚಾರಣೆ ನಡೆಸಿದ ರಂಜನ್‌ಗೋಗೊಯ್ ಅಧ್ಯಕ್ಷತೆಯ ಸುಪ್ರೀಂಕೋರ್ಟಿನ ಪೀಠ ಆತನ ಗಲ್ಲುಶಿಕ್ಷೆಯನ್ನು ಏಳು ವರ್ಷ ಕಠಿಣ ಶಿಕ್ಷೆಯಾಗಿ ಪರಿವರ್ತಿಸಿ ತೀರ್ಪಿತ್ತಿದೆ.

 ಕೊಲೆಪಾತಕವನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ. ಆದ್ದರಿಂದ ಶಿಕ್ಷೆಯನ್ನು ಏಳು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗೋವಿಂದಚಾಮಿಗೆ ಇನ್ನು ಹದಿನಾರು ತಿಂಗಳು ಜೈಲಿನಿದ್ದು ಹೊರಬರಲು ಸಾಧ್ಯವಾಗಲಿದೆ. ಸೌಮ್ಯ 2011 ಫೆಬ್ರವರಿ ಒಂದಕ್ಕೆ ಕೊಚ್ಚಿ-ಶೋರ್ನೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಗೋವಿಂದಚಾಮಿ ಅತ್ಯಾಚಾರವೆಸಗಿ, ಸೌಮ್ಯಾಳನ್ನು ರೈಲಿನಿಂದ ಕೆಳಗೆ ಎತ್ತಿಹಾಕಿದ್ದ. ನಂತರ ಫೆಬ್ರವರಿ ಆರರಂದು ತೃಶೂರ್ ಮೆಡಿಕಲ್ ಕಾಲೇಜಿನಲ್ಲಿ ಸೌಮ್ಯ ಮೃತಳಾಗಿದ್ದಳು. ಕೊಚ್ಚಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸೌಮ್ಯಾ ಉದ್ಯೋಗಿಯಾಗಿದ್ದಳು.

ಸೌಮ್ಯ ಅತ್ಯಾಚಾರಕ್ಕೊಳಗಾಗಿದ್ದು, ವೈಜ್ಞಾನಿಕವಾಗಿ ಸಾಬೀತಾಗಿದ್ದರೂ ಸೌಮ್ಯಳನ್ನು ರೈಲಿನಿಂದ ಒಕ್ಕಣ್ಣ ಗೋವಿಂದಚಾಮಿ ರೈಲಿನಿಂದ ಕೆಳಗೆ ಎಸೆದಿದ್ದಾನೆಂಬುದು ಸಾಬೀತಾಗಿಲ್ಲ. ವಿಚಾರಣೆವೇಳೆ ಎಲ್ಲ ಸಾಕ್ಷಿಗಳು ಸೌಮ್ಯಳೇ ರೈಲಿನಿಂದ ಕೆಳಗೆ ಹಾರಿದ್ದಳು ಎಂದು ಸಾಕ್ಷ್ಯ ಹೇಳಿದ್ದರು. ಆದ್ದರಿಂದ ಸುಪ್ರೀಂಕೋರ್ಟು ಪ್ರಾಶಿಕ್ಯೂಶನ್‌ಗೆ ಕೋರ್ಟಿನಲ್ಲಿ ಊಹಾಪೋಹಗಳನ್ನು ಹೇಳಬಾರದೆಂದು ತಾಕೀತು ಕೂಡಾ ಮಾಡಿತ್ತು. ಕೋರ್ಟಿನ ಪ್ರಶ್ನೆಗಳಿಗೆ ಪ್ರಾಸಿಕ್ಯೂಶನ್‌ನಿಂದ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಸೌಮ್ಯ ಕೊಲೆ ಪ್ರಕರಣದಲ್ಲಿ ಸುಪ್ರೀಂ ತೀರ್ಪಿಗೆ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೌಮ್ಯ ಕೊಲೆಪ್ರಕರಣದಲ್ಲಿ ಸುಪ್ರೀಂಕೋರ್ಟು ನೀಡಿದ ತೀರ್ಪಿನ ಕುರಿತು ವಿಷಾದ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಹತ್ಯೆಯಾದ ಸೌಮ್ಯಾಳ ಕುಟುಂಬಕ್ಕೆ ನ್ಯಾಯವೊದಗಿಸಲು ಅಗತ್ಯವಿರುವ ಎಲ್ಲ ಕ್ರಮಕೈಗೊಳ್ಳುವುದಾಗಿ ಆಮೂಲಕ ಅವರು ಭರವಸೆ ನೀಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ-

ಸುಪ್ರೀಂಕೋರ್ಟಿನ ತೀರ್ಪು ಮನಸಾಕ್ಷಿಯಿರುವವರಲ್ಲಿ ನಡುಕ ಸೃಷ್ಟಿಸುವಂತಹದ್ದಾಗಿದೆ. ಈ ತೀರ್ಪಿನ ವಿರುದ್ಧ ಅತ್ಯಂತ ಶೀಘ್ರವಾಗಿ ಸುಪ್ರೀಂಕೋರ್ಟಿನಲ್ಲಿ ಮರುಪರಿಶೀಲನಾ ಅರ್ಜಿ(ರಿವ್ಯೆ) ಅರ್ಜಿಸಲ್ಲಿಸಲಾಗುವುದು. ಭಾರತದಲ್ಲಿ ಲಭ್ಯವಿರುವ ನುರಿತಕಾನೂನು ತಜ್ಞರು, ಮತ್ತು ವಕೀಲರ ಸಹಾಯವನ್ನು ಸೌಮ್ಯಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಿಕ್ಕಾಗಿ ಪಡೆಯಲಾಗುವುದು. ವಿಚಾರಣಾ ಕೋರ್ಟು ಮತ್ತು ಹೈಕೋರ್ಟು ಪ್ರಕರಣದ ಎಲ್ಲ ಮಗ್ಗುಲುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಯೇ ಗೋವಿಂದ ಚಾಮಿಗೆ ಗಲ್ಲುಶಿಕ್ಷೆ ತೀರ್ಪು ನೀಡಿತ್ತು. ಫಾರೆನ್ಸಿಕ್ ಸಾಕ್ಷ್ಯಗಳು ಸಹಿತ ಹಲವಾರು ವಿಷಯಗಳು ಗೋವಿಂದಚಾಮಿಯ ಅಪರಾಧಕೃತ್ಯವನ್ನು ಸಾಬೀತುಪಡಿಸುವ ರೀತಿಯಲ್ಲಿದ್ದವು. ಕೈಉಗುರಿನ ಎಡೆಯಲ್ಲಿದ್ದ ಶರೀರದ ಅಂಶಗಳು ಕೂಡಾ ಗೋವಿಂದ ಚಾಮಿಯ ದುಷ್ಕೃತ್ಯಕ್ಕೆ ಪುರಾವೆಯಾಗಿ ವಿಚಾರಣಾ ಕೋರ್ಟಿನಲ್ಲಿ ದೃಢೀಕರಣಗೊಂಡಿತ್ತು. ಈ ರೀತಿ ಗೋವಿಂದಚಾಮಿಯ ಅಪರಾಧಕೃತ್ಯ ಶಂಕಾತೀತವಾಗಿ ಸಾಬೀತಾಗಿದ್ದು ಕೂಡಾ ಆಗಿದೆ. ಈ ಸಾಕ್ಷ್ಯಗಳ ಆಧಾರದಲ್ಲಿಯೇ ವಿಚಾರಣಾ ಕೋರ್ಟು ಆತನಿಗೆ ಗಲ್ಲುಶಿಕ್ಷೆ ವಿಧಿಸಿತ್ತು.ಆದರೆ ಈಗ ಸುಪ್ರೀಂಕೋರ್ಟು ನೀಡಿರುವ ತೀರ್ಪಿನಲ್ಲಿ ಈ ಹಿಂದೆ ವಿಚಾರಣಾ ಕೋರ್ಟು ಸಾಕ್ಷ್ಯವಾಗಿ ಪರಿಗಣಿಸಿದ ವಿಷಯಗಳಲ್ಲಿ ಅವಿಶ್ವಾಸ ವ್ಯಕ್ತವಾದಂತಾಗಿದೆ.

ಸುಪ್ರೀಂಕೋರ್ಟಿನ ತೀರ್ಪು ಒಂದು ಶಿಕ್ಷೆಯೇ ಆಗುವುದಿಲ್ಲ. ಸಾಮಾನ್ಯಬುದ್ಧಿಗೆ ಇದನ್ನು ಒಪ್ಪಲು ಕಷ್ಟವಿದೆ. ಮನುಷ್ಯತ್ವಕ್ಕೆ ಬೆಲೆನೀಡುವ ಯಾರಲ್ಲಿಯೂ ಈ ತೀರ್ಪು ಆತಂಕ ಸೃಷ್ಟಿಸುವಂತಹದ್ದಾಗಿದೆ.

ಸೌಮ್ಯ ಅನುಭವಿಸಬೇಕಾಗಿ ಬಂದ ಕ್ರೂರ ದುರಂತದ ಮುಂದೆ ಈ ತೀರ್ಪು ಏನೇನು ಅಲ್ಲ ಎಂದು ಸೌಮ್ಯಳ ತಾಯಿ ಮತ್ತು ಸಮಾಜ ಪ್ರತಿಕ್ರಿಯಿಸಿದೆ. ಇದು ನ್ಯಾಯಯುತವೇ ಆಗಿದೆ. ಈ ಭಾವನೆಯನ್ನು ಸಂಪೂರ್ಣವಾಗಿ ಹೊಂದಿಯೇ ಸೌಮ್ಯಳಿಗೆ ನ್ಯಾಯ ಸಿಗುವಂತಾಗಲು ಸುಪ್ರೀಂಕೋರ್ಟಿಗೆ ರಿವ್ಯೆಪಿಟೀಶನ್ ಹಾಕಲಾಗುವುದು. ಸೌಮ್ಯಳ ತಾಯಿಯನ್ನು ನಾನು ಸಂತೈಸುತ್ತೇನೆ ಮತ್ತು ಅವರನೋವು ತನ್ನದೂ ಆಗಿದೆ. ನ್ಯಾಯ ಸಿಗಲು ಅಗತ್ಯವಾದ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವೆ. ಸೌಮ್ಯಳ ತಾಯಿಯನ್ನು ಭೇಟಿಯಾಗುವೆ. ಸೌಮ್ಯಳಿಗೆ ನ್ಯಾಯ ದೊರಕಿಸಿಕೊಡಲು ಸರಕಾರ ಬದ್ಧವಾಗಿದೆ. ಅದಕ್ಕೆ ಅಗತ್ಯವಾದ ಕ್ರಮಗಳನ್ನು ಮಾಡಿಯೇ ತೀರುತ್ತೇನೆ.

ನ್ಯಾಯದ ತಾಂತ್ರಿಕ ಲೋಪದೋಷಗಳನ್ನು ದುರುಪಯೋಗಿಸಿ ಮಹಿಳೆಯರಿಗೆ ಬೆದರಿಕೆಯಾಗಿ ಗೋವಿಂದಚಾಮಿಯಂತಹವರನ್ನು ಸಮಾಜದಲ್ಲಿ ವಿಹರಿಸಲು ಬಿಡಲಾಗದು. ಇದನ್ನು ಖಚಿತಪಡಿಸಲಿಕ್ಕಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ.

ಹೃದಯ ಭೇದಕ ತೀರ್ಪು ಇದು: ಹತ್ಯೆಯಾದ ಸೌಮ್ಯಳ ತಾಯಿ

ಸೌಮ್ಯಾ ಕೊಲೆಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಬಂದ ತೀರ್ಪು ಹೃದಯಭೇದಕವಾದದ್ದೆಂದು ಹತ್ಯೆಯಾದ ಸೌಮ್ಯಾಳ ತಾಯಿ ಸುಮತಿ ಹೇಳಿದ್ದಾರೆಂದು ವರದಿಯೊಂದು ತಿಳಿಸಿದೆ.

ಸುಪ್ರೀಂಕೋರ್ಟುನಿಂದ ಗೋವಿಂದಚಾಮಿಯ ಗಲ್ಲುಶಿಕ್ಷೆಯನ್ನು ರದ್ದುಪಡಿಸಿದ ತೀರ್ಪು ಹೊರಬಿದ್ದ ಬೆನ್ನಿಗೆ ಸುಮತಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ನ್ಯಾಯಕ್ಕಾಗಿ ಕೊನೆವರೆಗೂ ಹೋರಾಡುವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗೋವಿಂದಚಾಮಿಗೆ ಗಲ್ಲುಶಿಕ್ಷೆ ಆಗುವವರೆಗೆ ಕೇಸಿನ ಹಿಂದೆ ಹೋಗುವೆ. ಗೋವಿಂದಚಾಮಿ ವಿರುದ್ಧ ಬಹಳಷ್ಟು ಪುರಾವೆಗಳಿವೆ. ಆದರೆ ಗಲ್ಲುಶಿಕ್ಷೆ ರದ್ದು ಸರಕಾರದ ನಿರ್ಲಕ್ಷ್ಯದಿಂದಾಗಿ ಆಗಿದೆ ಎಂದು ಅವರು ನೊಂದು ನುಡಿದಿದ್ದಾರೆ.

ಅಗತ್ಯವೆಂದಾದರೆ ಮುಖ್ಯಮಂತ್ರಿಯನ್ನು ಕೂಡಾ ಭೇಟಿಯಾಗುವೆ. ಸುಪ್ರೀಂಕೋರ್ಟಿನಿಂದ ನ್ಯಾಯ ಲಭಿಸುತ್ತದೆ ಎಂಬ ನಿರೀಕ್ಷೆಯನ್ನು ಅವರು ಹಿಂದೆ ಮಾಧ್ಯಮಗಳ ಜೊತೆಮಾತಾಡುತ್ತಾ ವ್ಯಕ್ತಪಡಿಸಿದ್ದರು ಎಂದುವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News