‘‘ಕೇಜ್ರಿವಾಲ್ ರ ಬಾಯಿಗಿಂತ ನಾಲಗೆ ದೊಡ್ಡದು’’

Update: 2016-09-15 11:07 GMT

ಬೆಂಗಳೂರು,ಸೆ.15 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರದ್ದು ಹರಿತವಾದ ನಾಲಗೆ. ಅವರು ರಾಜಕೀಯಕ್ಕೆ ಆಗಮಿಸಿದಾಗಿನಿಂದ ತಮ್ಮ ಹರಿತವಾದ ನಾಲಗೆಯಿಂದಲೇ ತಮ್ಮ ವಿರೋಧಿಗಳನ್ನು ಗಾಯಗೊಳಿಸಿದವರು ಅವರು. ಆದರೆ ಇದೀಗ ಅವರ ಹರಿತ ವಾದ ನಾಲಗೆಗೆ ಸ್ವಲ್ಪ ದಿನದ ಮಟ್ಟಿಗೆ ಬಲವಂತದ ವಿರಾಮ ನೀಡಲಾಗಿದೆ. ಇದು ಅವರ ವಿರೋಧಿಗಳನ್ನೂ ಸ್ವಲ್ಪ ಮಟ್ಟಿಗೆ ನಿರಾಳಗೊಳಿಸಬಹುದು. ಆದರೆ ಈಗ ವೈದ್ಯರು ಹೇಳಿರುವುದನ್ನು ನಂಬಬೇಕಾದರೆ ಕೇಜ್ರಿವಾಲ್ ಅವರ ನಾಲಗೆ ನಿಜವಾಗಿಯೂ ಸ್ವಲ್ಪ ಉದ್ದವೇ ಇತ್ತು. ಅದಕ್ಕಾಗಿಯೇ ಅವರೀಗ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ತಮ್ಮ ತೀವ್ರ ಕೆಮ್ಮಿನ ಸಮಸ್ಯೆಗೆ ನಗರದ ನಾರಾಯಣ್ ಹೆಲ್ತ್ ಸಿಟಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಕೇಜ್ರಿವಾಲ್ ಅವರಿಗೆ ಕೆಲ ದಿನಗಳ ಮಟ್ಟಿಗೆ ಮಾತನಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಕಳೆದ 40 ವರ್ಷಗಳಿಂದ ಅವರನ್ನು ಕಾಡುತ್ತಿರುವ ತೀವ್ರ ಕೆಮ್ಮಿನ  ಸಮಸ್ಯೆಗೆ ಪರಿಹಾರವಾಗಿ ವೈದ್ಯರು ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೇಜ್ರಿವಾಲ್ ಅವರು ದೊಡ್ಡದಾದ ಸಾಫ್ಟ್ ಪ್ಯಾಲೇಟ್ ಹಾಗೂ ಉವುಲಾ ಹೊಂದಿದ್ದರೆಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸರಳವಾಗಿ ಹೇಳುವುದಾದರೆ ಅವರ ಬಾಯಿಯ ಗಾತ್ರಕ್ಕೆ ಹೋಲಿಸಿದಾಗ ಅವರ ನಾಲಗೆ ಸ್ವಲ್ಪ ಹೆಚ್ಚೇ ಉದ್ದವಿತ್ತು.

ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಆಸ್ಪತ್ರೆ ಈ ಬಗ್ಗೆ ವಿವರ ನೀಡಿದ್ದು ಅವರ ಬಾಯಿಯಲ್ಲಿ ಅವರ ನಾಲಗೆಯ ಚಲನೆಗೆ ಸಾಕಷ್ಟು ಜಾಗವಿರಲಿಲ್ಲ ಹಾಗೂ ಇದರಿಮದಾಗಿ ಅವರಿಗೆ ಅಲರ್ಜಿಯುಂಟಾದಾಗಲೆಲ್ಲಾ ಅವರ ಲಾಲಾರಸ ವಾಯು ನಾಳಕ್ಕೆ ಪ್ರವೇಶಿಸಿ ಅವರಿಗೆ ಕೆಮ್ಮಿನ ಸಮಸ್ಯೆಯೊಡ್ಡಿತ್ತು. ಸಮಸ್ಯೆಯಿದ್ದ ಕೇಜ್ರಿವಾಲ್ ಅವರ ಕಿರು ನಾಲಗೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ.

ಆದರೆ ಅವರಿಗೆ ಒಂದೆರಡು ದಿನ ಮಾತನಾಡಲು ಸಾಧ್ಯವಿಲ್ಲವೆಂದ ಮಾತ್ರಕ್ಕೆ ಅವರ ವಿರೋಧಿಗಳು ಖುಷಿ ಪಡುವ ಹಾಗಿಲ್ಲ. ಕೇಜ್ರಿವಾಲ್ ಅವರ ಬೆರಳುಗಳು ಚುರುಕಾಗಿದ್ದು ಅವರು ಟ್ವೀಟ್ ಮಾಡುವುದಕ್ಕೆ ಏನೂ ತೊಂದರೆಯಿಲ್ಲವಾಗಿದೆ.

ಕೇಜ್ರಿವಾಲ್ ಅವರು ಈ ಹಿಂದೆಯೂ ತಮ್ಮ ಕೆಮ್ಮಿನ ಸಮಸ್ಯೆಯಿಂದಾಗಿ ಹಲವಾರು ಬಾರಿ ರಜೆ ಮಾಡಬೇಕಾಗಿ ಬಂದಿದ್ದು ಆವಾಗೆಲ್ಲಾ ಟ್ವಿಟ್ಟರಿಗರು ಅವರನ್ನು ಅಣಕಿಸಲು ಹಿಂದೆ ಮುಂದೆ ನೋಡಿರಲಿಲ್ಲ. ಇಲ್ಲಿವೆ ಅಂತಹ ಕೆಲ ಸ್ವಾರಸ್ಯಕರ ಟ್ವೀಟುಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News