×
Ad

ಅಖಿಲೇಶ್ ಯಾದವ್ ಎಸ್‌ಪಿಯ ಮುಖ್ಯಮಂತ್ರಿ ಅಭ್ಯರ್ಥಿ: ಅಗರವಾಲ್

Update: 2016-09-15 23:51 IST

ಲಕ್ನೊ, ಸೆ.15: ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟದ ಮಧ್ಯೆಯೇ ಎಸ್‌ಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ನರೇಶ್ ಅಗರವಾಲ್ ಅವರು, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ ಎಂದು ಇಂದಿಲ್ಲಿ ಹೇಳಿದರು.
ಅಖಿಲೇಶ್ ಮತ್ತು ಮುಲಾಯಂ ಅವರ ನೇತೃತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಮತ್ತು ಹಾಲಿ ಮುಖ್ಯಮಂತ್ರಿ ಅಖಿಲೇಶ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುತ್ತಾರೆ ಎಂದ ಅವರು, ಯಾವುದೇ ಹೊರಗಿನ ವ್ಯಕ್ತಿ ಹಸ್ತಕ್ಷೇಪ ಮಾಡುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಬೇಕು ಎಂದರು.
ಅಖಿಲೇಶ್ ಅವರು ತನ್ನ ಚಿಕ್ಕಪ್ಪ ಹಾಗೂ ಸಂಪುಟ ಸಚಿವ ಶಿವಪಾಲ್ ಯಾದವ್ ಅವರಿಂದ ಪ್ರಮುಖ ಖಾತೆಗಳನ್ನು ಕಿತ್ತುಕೊಂಡ ಬಳಿಕ ಯಾದವ್ ಕುಟುಂಬದೊಳಗಿನ ಕಲಹ ಬಹಿರಂಗಗೊಂಡಿತ್ತು. ಮಂಗಳವಾರ ಮುಲಾಯಂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಅಖಿಲೇಶ್ ಸ್ಥಾನದಲ್ಲಿ ಶಿವಪಾಲ್‌ರನ್ನು ನೇಮಕಗೊಳಿಸಿದ್ದರು. ಅಂದೇ ರಾತ್ರಿ ಅಖಿಲೇಶ್ ಶಿವಪಾಲ್ ಬಳಿಯಿಂದ ಖಾತೆಗಳನ್ನು ಕಿತ್ತುಕೊಂಡಿದ್ದರು.
ಅಖಿಲೇಶ್ ಅವರು ನಿನ್ನೆ, ಪಕ್ಷಕ್ಕೆ ಇತ್ತೀಚೆಗೆ ಮರುಸೇರ್ಪಡೆಗೊಂಡಿರುವ ಅಮರ್ ಸಿಂಗ್‌ರನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ‘ಹೊರಗಿನ ವ್ಯಕ್ತಿ’ಯ ಬಗ್ಗೆ ಉಲ್ಲೇಖಿಸಿದ್ದರು.
ಆದರೆ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಒತ್ತಿ ಹೇಳಿದ ಅಗರವಾಲ್, ನಾವು ಮುಲಾಯಂ ಅವರ ನಿರ್ಧಾರವನ್ನು ಅನುಸರಿಸುತ್ತೇವೆ ಮತ್ತು ಮುಖ್ಯಮಂತ್ರಿಗಳು ಖಾತೆ ಹಂಚಿಕೆಯ ಹಕ್ಕು ಹೊಂದಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News