ಭದ್ರತಾ ಮಂಡಳಿ ಸುಧಾರಣೆಗೆ ಸಕಾಲ: ಮೂನ್
ವಿಶ್ವಸಂಸ್ಥೆ, ಸೆ. 15: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಪ್ರಾತಿನಿಧಿಕವನ್ನಾಗಿ ಮಾಡಲು ಇದು ಸಕಾಲ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಹಾಗೂ ‘‘ಹದಗೆಡುತ್ತಿರುವ’’ ಭದ್ರತಾ ಸವಾಲುಗಳಿಗೆ ಕಿವಿಗೊಡುವಂತೆ ಅವರು ಸದಸ್ಯ ದೇಶಗಳಿಗೆ ಮನವಿ ಮಾಡಿದ್ದಾರೆ. ‘‘ವಿಶ್ವಸಂಸ್ಥೆಯ, ಅದರಲ್ಲೂ ಮುಖ್ಯವಾಗಿ ಭದ್ರತಾ ಮಂಡಳಿಯ ಸುಧಾರಣೆಯ ವಿಷಯಕ್ಕೆ ಬಂದಾಗ, ಭದ್ರತಾ ಮಂಡಳಿಯು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಪ್ರಾತಿನಿಧಿಕವಾಗುವ ನಿಟ್ಟಿನಲ್ಲಿ ಸುಧಾರಣೆಗೊಳ್ಳಬೇಕು ಎಂಬುದಾಗಿ ನಾನು ಹಲವು ಸಲ ಹೇಳಿದ್ದೇನೆ. ಎಷ್ಟು ಸಲ ಎಂದು ನನಗೇ ಗೊತ್ತಿಲ್ಲ’’ ಎಂದು ಮೂನ್ ಹೇಳಿದರು. ಮುಂದಿನ ವಾರ ಆರಂಭಗೊಳ್ಳಲಿರುವ ವಿಶ್ವಸಂಸ್ಥೆಯ ಮಹಾಧಿವೇಶನಕ್ಕೆ ಮುಂಚಿತವಾಗಿ ಬುಧವಾರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಭದ್ರತಾ ಮಂಡಳಿಯ ಸುಧಾರಣೆಯ ಹೊಣೆ ಇರುವುದು ವಿಶ್ವಸಂಸ್ಥೆಯ ಸದಸ್ಯ ದೇಶಗಳ ಮೇಲೆ ಎಂದು ಹೇಳಿದ ಅವರು, ಆದರೆ, ದುರದೃಷ್ಟವಶಾತ್, ಈ ಮಹತ್ವದ ವಿಷಯದಲ್ಲಿ ಒಮ್ಮತಕ್ಕೆ ತಲುಪಲು ಅವುಗಳಿಗೆ ಸಾಧ್ಯವಾಗಿಲ್ಲ ಎಂದರು.