ಕರ್ನಾಟಕ ಮತ್ತು ತಮಿಳುನಾಡಿಗೆ ಸುಪ್ರೀಂ ತಪರಾಕಿ
ಹೊಸದಿಲ್ಲಿ, ಸೆ.15: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರಿನ ಹಂಚಿಕೆಗಾಗಿ ತಾನು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಹೊರಡಿಸಿದ್ದ ಆದೇಶದ ವಿರುದ್ಧ ಬಂದ್‌ಗಳು ಮತ್ತು ಪ್ರತಿಭಟನೆಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ಉಭಯ ರಾಜ್ಯಗಳ ಸರಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಕಾನೂನಿನ ಆಡಳಿತಕ್ಕಾಗಿ ತಮ್ಮ ಘನತೆ ಮತ್ತು ಗೌರವವನ್ನು ಕಾಯ್ದುಕೊಳ್ಳುತ್ತವೆಂದು ನಾವು ನಿರೀಕ್ಷಿಸುತ್ತೇವೆ. ಸರ್ವೋಚ್ಚ ನ್ಯಾಯಾಲಯವು ಆದೇಶವೊಂದನ್ನು ಹೊರಡಿಸಿದ ನಂತರ ಬಂದ್‌ಗಳು ಅಥವಾ ಪ್ರತಿಭಟನೆಗಳು ನಡೆಯುವಂತಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ನಮ್ಮ ಆದೇಶದ ಪಾಲನೆಯಾಗಬೇಕು. ಇದನ್ನು ನಿಮ್ಮ ಸರಕಾರಗಳಿಗೆ ಇಂದೇ ತಿಳಿಸಿ ಎಂದು ನ್ಯಾ.ದೀಪಕ್ ಮಿಶ್ರಾ ಅವರು ನ್ಯಾಯಾಲಯದ ಹಾಲ್‌ಗೆ ಕರೆಸಲಾಗಿದ್ದ ಉಭಯ ರಾಜ್ಯಗಳ ವಕೀಲರ ತಂಡಗಳಿಗೆ ತಿಳಿಸಿದರು. ಉಭಯ ರಾಜ್ಯಗಳಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಕಣ್ಣೆದುರಿನಲ್ಲೇ ಗುಂಪುಗಳು ನಡೆಸಿದ ದಾಂಧಲೆ ಮತ್ತು ಲೂಟಿಗಳಿಂದಾಗಿ ಆಗಿರುವ ಭಾರೀ ನಷ್ಟವನ್ನು ಪ್ರಮುಖವಾಗಿ ಬಿಂಬಿಸಿ, ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ ಪಿ.ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ದುಷ್ಕರ್ಮಿಗಳ ವಿರುದ್ಧ ಕ್ರಮ ಜರಗಿಸುವಂತೆ ಮತ್ತು ನಷ್ಟವನ್ನು ತುಂಬಿಕೊಡುವಂತೆ ಉಭಯ ರಾಜ್ಯಗಳ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.
ಯಾವುದೇ ಪ್ರತಿಭಟನೆಗಳು ಅಥವಾ ವಿನಾಶ ಅಥವಾ ಹಾನಿ ಸಂಭವಿಸದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರಗಳ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿದ ನ್ಯಾ.ಯು.ಯು.ಲಲಿತ್ ಅವರನ್ನು ಒಳಗೊಂಡಿದ್ದ ಪೀಠವು ,ಜನರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತಿಲ್ಲ. ಇಂತಹ ಪರಿಸ್ಥಿತಿ ಉದ್ಬವಿಸುವುದನ್ನು ತಡೆಯುವುದು ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳ ಬದ್ಧತೆಯಾಗಿದೆ ಎಂದು ಹೇಳಿತು.
ನ್ಯಾಯಾಲಯವು ಕಾವೇರಿಗೆ ಸಂಬಂಧಿಸಿದ ಇತರ ವಿಷಯಗಳ ಜೊತೆಗೆ ಅರ್ಜಿಯ ವಿಚಾರಣೆಯನ್ನು ಸೆ.20ಕ್ಕೆ ನಿಗದಿಗೊಳಿಸಿದೆ.