×
Ad

ಕಳವಳಕಾರಿ ಆರೋಗ್ಯ ಪರಿಸ್ಥಿತಿ, ತಪ್ಪು ಅಂಕಿ ಅಂಶ: ಭಾರತಕ್ಕೆ ಡಬ್ಲ್ಯುಎಚ್ಒ ತರಾಟೆ

Update: 2016-09-16 08:40 IST

ಹೊಸದಿಲ್ಲಿ, ಸೆ.16: ಸರಕಾರದ ಅಧೀನದಲ್ಲಿರುವ ರೋಗ ಸಮೀಕ್ಷೆ ವ್ಯವಸ್ಥೆ ನೀಡಿರುವ ತಪ್ಪು ಅಂಕಿ ಅಂಶದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಭಾರತ ಪ್ರತಿನಿಧಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೋಗ ವ್ಯಾಪಕವಾಗಿರುವ ವಾಸ್ತವ ಸ್ಥಿತಿಯನ್ನು ಅರಿಯುವಲ್ಲಿ ವ್ಯವಸ್ಥೆ ವಿಫಲವಾಗಿದೆ ಎಂದು ಆಕ್ಷೇಪಿಸಿದೆ.

ದೋಷಪೂರಿತ ಆರೋಗ್ಯ ಸಮೀಕ್ಷೆ ವ್ಯವಸ್ಥೆಯಿಂದಾಗಿ ತೀರಾ ಕಡಿಮೆ ಪ್ರಮಾಣದಲ್ಲಿ ಚಿಕೂನ್‌ಗುನ್ಯ ಹಾಗೂ ಡೆಂಗ್ ಜ್ವರ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಭಾರತವನ್ನು ತರಾಟೆಗೆ ತೆಗೆದುಕೊಂಡಿದೆ.

ದೇಶದಲ್ಲಿ ರೋಗ ಸರ್ವೇಕ್ಷಣೆ ಹಾಗೂ ಪ್ರಯೋಗಾಲಯ ಸೌಲಭ್ಯವನ್ನು ಹೆಚ್ಚಿಸಲು ಅಗತ್ಯ ಪ್ರಮಾಣದ ಹೂಡಿಕೆ ಮಾಡುವಂತೆ ಪ್ರತಿನಿಧಿ ಹೆಂಕ್ ಬೆಕೆಂಡಮ್ ಸಲಹೆ ಮಾಡಿದ್ದಾರೆ.

ಭಾರತದ ಆರೋಗ್ಯ ಸರ್ವೇಕ್ಷಣೆ ವ್ಯವಸ್ಥೆಯಲ್ಲಿ ಕೆಲ ಸರಕಾರಿ ಆಸ್ಪತ್ರೆಗಳಿಂದ ಮಾತ್ರ ರಕ್ತಮಾದರಿ ಸಂಗ್ರಹಿಸುವ ದೋಷಪೂರಿತ ವ್ಯವಸ್ಥೆ ಇದೆ. ಆದರೆ ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳನ್ನು ಈ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆಕ್ಷೇಪಿಸಿದ್ದಾರೆ. ಖಾಸಗಿ ವಲಯದಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ದೇಶದ ಮೇಲೆ ಎಷ್ಟು ಹೊರೆ ಇದೆ ಎನ್ನುವುದನ್ನು ವಾಸ್ತವವಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಈ ವಲಯದ ಅಂಕಿ ಅಂಶಗಳನ್ನು ಕೂಡಾ ಪರಿಗಣಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡೆಂಗ್ ಪ್ರಕರಣಗಳಲ್ಲಿ ಕೇವಲ ಪ್ರಯೋಗಾಲಯಗಳಲ್ಲಿ ದೃಢೀಕರಣಗೊಂಡ ಪ್ರಕರಣಗಳನ್ನಷ್ಟೇ ಅಲ್ಲದೇ, ಸಂಭಾವ್ಯ ಪ್ರಕರಣಗಳ ಬಗ್ಗೆ ಕೂಡಾ ಮಾಹಿತಿ ನೀಡಬೇಕು ಹಾಗೂ ಖಾಸಗಿ ವಲಯವನ್ನೂ ಸರ್ವೇಕ್ಷಣೆ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News