ಗೂಗಲ್ ಪ್ರಕಾರ ಚಿಕುನ್ ಗುನ್ಯಾದಿಂದ ಯಾರೂ ಸಾಯುವುದಿಲ್ಲ ಎಂದ ದಿಲ್ಲಿ ಆರೋಗ್ಯ ಸಚಿವ
ಹೊಸದಿಲ್ಲಿ, ಸೆ.16: ಚಿಕುನ್‌ಗುನ್ಯ ರೋಗದಿಂದ ಜನ ಸಾಯುವುದಿಲ್ಲ ಎಂಬ ತಮ್ಮ ಹೇಳಿಕೆಯನ್ನು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸಮರ್ಥಿಸಿಕೊಂಡಿದ್ದಾರೆ. "ಇದು ನನ್ನ ಸ್ವಂತ ಅಭಿಪ್ರಾಯ ಅಲ್ಲ. ಈ ಬಗ್ಗೆ ಗೂಗಲ್‌ನಲ್ಲಿ ನಿಖರ ಮಾಹಿತಿ ಇದೆ" ಎಂದು ಅವರು ಹೇಳಿದ್ದಾರೆ.
ಚಿಕೂನ್‌ಗುನ್ಯಾದಿಂದ ದಿಲ್ಲಿಯ ಜನ ಕಂಗೆಡುವ ಅಗತ್ಯವಿಲ್ಲ. ಆದರೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಸೊಳ್ಳೆಯಿಂದ ಹರಡುವ ಈ ರೋಗದ ಲಕ್ಷಣ ಕಾಣಿಸಿಕೊಂಡರೆ ಮಾತ್ರ ಆಸ್ಪತ್ರೆಗಳಿಗೆ ತೆರಳಿ ಎಂದು ಅವರು ಸಲಹೆ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜ್ಯ ಸರಕಾರ ಎಲ್ಲ ಅಗತ್ಯ ನೆರವು ನೀಡಲು ಸಿದ್ಧವಿದೆ. ಆದರೆ ಭೀತಿಯಿಂದ ಆಸ್ಪತ್ರೆ ಸೇರಬೇಡಿ. ವೈದ್ಯರು ಸಲಹೆ ಮಾಡಿದರೆ ಮಾತ್ರ ಆಸ್ಪತ್ರೆ ಸೇರಿ" ಎಂದು ಸೂಚಿಸಿದರು.
ಚಿಕುನ್‌ಗುನ್ಯಾದಿಂದ ಇತ್ತೀಚೆಗೆ ಜನ ಸತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಎಲ್ಲ ಸಾವಿನ ಪ್ರಕರಣಗಳು ಒಂದೇ ಆಸ್ಪತ್ರೆಯಿಂದ ವರದಿಯಾಗಿರುವುದು ಸಂದೇಹಾಸ್ಪದ ಎಂದು ಎಂದು ಹೇಳಿದರು.
"ಚಿಕುನ್‌ಗುನ್ಯದಿಂದ ವಿಶ್ವದ ಎಲ್ಲೂ ಸಾವು ಸಂಭವಿಸುತ್ತಿಲ್ಲ. ದಿಲ್ಲಿಯ ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಹೇಗೆ ಸಾಯುತ್ತಾರೆ? ಇತ್ತೀಚೆಗೆ ಸಂಭವಿಸಿದ ಸಾವಿನ ಬಗ್ಗೆ ತನಿಖೆ ಕೈಗೊಂಡಾದ ಬಹುತೇಕ ಮಂದಿ ವೃದ್ಧಾಪ್ಯ ಕಾರಣದಿಂದ ಹಾಗೂ ಬೇರೆ ರೋಗಗಳಿಂದ ಬಳಲಿ ಮೃತಪಟ್ಟಿರುವುದು ದೃಢಪಟ್ಟಿದೆ" ಎಂದು ಸಚಿವರು ಸಮರ್ಥಿಸಿಕೊಂಡರು.
ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನೆಡ್ಡಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಔಷಧಿಗಳು ಅಥವಾ ವೈದ್ಯರ ಕೊರತೆ ಇಲ್ಲ. ಎಂಥದ್ದೇ ಪರಿಸ್ಥಿತಿಯನ್ನು ನಿಭಾಯಿಸಲು ಕೂಡಾ ಕೇಂದ್ರ ಸರಕಾರ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.