×
Ad

ಅಪರಾಧಿ ನೇತಾಗಳಿಗೆ ಆಜೀವ ನಿಷೇಧ: ದಿಲ್ಲಿ ಹೈಕೋರ್ಟ್‌ನಿಂದ ಕೇಂದ್ರದ ಉತ್ತರ ಕೋರಿಕೆ

Update: 2016-09-16 18:51 IST

ಹೊಸದಿಲ್ಲಿ, ಸೆ.16: ಅಪರಾಧಿಯೆಂದು ಘೋಷಿಸಲ್ಪಟ್ಟ ವ್ಯಕ್ತಿಯೊಬ್ಬನಿಗೆ 6 ವರ್ಷಗಳ ಬಳಿಕ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಜನ ಪ್ರಾತಿನಿಧ್ಯ ಕಾಯ್ದೆಯ ಕೆಲವು ಪ್ರಸ್ತಾವಗಳನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿರುವ ಸಾರ್ವಜನಿಕ ಮೊಕದ್ದಮೆಯೊಂದರ ಸಂಬಂಧ ದಿಲ್ಲಿ ಹೈಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

 ಅಪರಾಧಿಗಳೆಂದು ಘೋಷಿಸಲಾದ ವ್ಯಕ್ತಿಗಳು ಜೀವಾವಧಿ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಬೇಕೆಂದು ಪ್ರತಿಪಾದಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಈ ಮನವಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್‌ರಿದ್ದ ವಿಭಾಗೀಯ ಪೀಠವೊಂದು ಈ ಸಂಬಂಧ ಸಂಸದೀಯ ವ್ಯವಹಾರ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯಗಳಿಂದ ಉತ್ತರವನ್ನು ಕೋರಿದೆ.

ಜನಪ್ರಾತಿನಿಧ್ಯ ಕಾಯ್ದೆ-1951ರ ಸೆ.8 ಹಾಗೂ 9 ಅನರ್ಹತೆಯ ಅವಧಿಯನ್ನು ಕೇವಲ 6 ವರ್ಷಗಳಿಗಷ್ಟೇ ಸೀಮಿತಗೊಳಿಸಿರುವುದರಿಂದ ಅವುಗಳನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ಅಪರಾಧಿ ವ್ಯಕ್ತಿಗಳಿಗೆ ಅನರ್ಹತಾ ನಿಯಮವು ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಗಳಿಗೆ ಬೇರೆ ಬೇರೆ ವಿಧಗಳಲ್ಲಿ ಅನ್ವಯ ಮಾಡಬಾರದೆಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News