ಟೈಗರ್ ಝಿಂದಾ ಹೈ

Update: 2016-09-17 06:16 GMT

‘ಏಕ್ ಥಾ ಟೈಗರ್’ 2012ರಲ್ಲಿ ಬಾಲಿವುಡ್‌ನಲ್ಲಿ ಎಬ್ಬಿಸಿದ ಗದ್ದಲ ನಿಮಗೆ ನೆನಪಿರಬಹುದು. ರಾ ಮತ್ತು ಐಎಸ್‌ಐ ಏಜೆಂಟ್‌ಗಳಿಬ್ಬರು ಪರಸ್ಪರ ಪ್ರೀತಿಯ ಬಲೆಯೊಳಗೆ ಬಿದ್ದು, ಎರಡೂ ದೇಶಗಳಿಂದ ತಿರಸ್ಕೃತರಾಗಿ, ಮೂರನೆಯ ಬದುಕೊಂದನ್ನು ಆರಿಸಿಕೊಳ್ಳುವ ಪ್ರಯತ್ನ ಆ ಚಿತ್ರದಲ್ಲಿ ನಡೆದಿತ್ತು. ಚಿತ್ರ ಮಾಮೂಲಿ ಸ್ಟಂಟ್‌ಗಳಿಗಾಗಿ ಸುದ್ದಿ ಮಾಡಿತ್ತಾದರೂ, ಎರಡು ದೇಶಗಳ ಗೂಢಚರ್ಯೆ ಸಂಸ್ಥೆಗೆ ಅಂತಿಮವಾಗಿ ಇಬ್ಬರು ಏಜೆಂಟ್‌ಗಳು ಸಡ್ಡು ಹೊಡೆದು, ಪ್ರೀತಿಯನ್ನು ಆಯ್ದುಕೊಳ್ಳುವ ಅಂತಿಮ ಸಂದೇಶ ಸಾಕಷ್ಟು ಚರ್ಚೆಗೀಡಾಗಿತ್ತು. ರಾ ಏಜೆಂಟಾಗಿ ಸಲ್ಮಾನ್ ಖಾನ್ ನಟಿಸಿದ್ದರೆ, ಐಎಸ್‌ಐ ಏಜೆಂಟ್ ಆಗಿ ಕತ್ರೀನಾ ಕೈಫ್ ನಟಿಸಿದ್ದರು. ಉಭಯ ದೇಶಗಳ ವೈರವನ್ನು ಕಟ್ಟಿಕೊಂಡು, ಪ್ರೀತಿಗಾಗಿ ಹೊಸ ದೇಶವೊಂದನ್ನು ಹುಡುಕಿಕೊಂಡು ಹೋದ ಈ ಇಬ್ಬರು ಏಜೆಂಟ್‌ಗಳು ಏನಾದರು?

ಅದಕ್ಕೆ ಉತ್ತರವಾಗಿ ‘ಏಕ್ ಥಾ ಟೈಗರ್’ ಚಿತ್ರದ ಎರಡನೆ ಭಾಗ ಹೊರ ತರುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಇದರಲ್ಲೂ ಸಲ್ಮಾನ್ ಮತ್ತು ಕತ್ರೀನಾ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ, ಇಲ್ಲಿ ಸಲ್ಮಾನ್ ಪಾತ್ರ ಇನ್ನಷ್ಟು ಪ್ರಬುದ್ಧವಾಗಲಿದೆ. 17 ವರ್ಷದಿಂದ 70 ವರ್ಷದವರೆಗಿನ ಟೈಗರ್ ಕತೆ ಇಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಅಲಿ ಅಬ್ಬಾಸ್ ಜಾಫರ್ ಅವರ ಕತೆಯನ್ನು ಹೊಂದಿರುವ ಈ ಚಿತ್ರ, ಕಬೀರ್ ಖಾನ್ ನೇತೃತ್ವದಲ್ಲೇ ಮುಂದುವರಿಯಲಿದೆ. ಏಕ್ ಥಾ ಟೈಗರ್ ಬಳಿಕ ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಇಬ್ಬರ ಜೋಡಿ ಯಶಸ್ವಿಯಾಗಿತ್ತು. ಇದೀಗ ಟೈಗರ್‌ಗೆ ಜೀವ ಕೊಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಟೈಗರ್ ಅದು ಹೇಗೆ ಗರ್ಜಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News