ಐದರ ಬೆನ್ನ ಹಿಂದೆ ಒಮುಂಗ್

Update: 2016-09-17 06:18 GMT

ಒಮುಂಗ್ ಕುಮಾರ್ ಅವರ ‘ಮೇರಿಕೋಮ್’ ಬಾಕ್ಸಿಂಗ್ ಮಹಿಳೆಯೊಬ್ಬಳ ಸಾಧನೆಯನ್ನು ಕೇಂದ್ರವಾಗಿಟ್ಟು ಮಾಡಿದ ಚಿತ್ರ. ಬಾಕ್ಸ್ ಆಫೀಸ್‌ನಲ್ಲೂ ಇದು ಗೆದ್ದಿತ್ತು. ಆ ಬಳಿಕ ಅವರು ಆಯ್ದುಕೊಂಡಿದ್ದು ‘ಸರಬ್ಜಿತ್’. ಈ ಎರಡೂ ಚಿತ್ರಗಳು ಆತ್ಮಕಥೆಯನ್ನು ಆಧರಿಸಿರುವುದರಿಂದ ನಿರ್ದೇಶಕನಿಗೆ ಭಾರೀ ಸವಾಲನ್ನು ಒಡ್ಡಿತ್ತು ನಿಜ. ಆದರೆ ಚಿತ್ರವನ್ನು ಮನರಂಜನಾತ್ಮಕವಾಗಿಯೂ ಕಟ್ಟಿಕೊಡುವಲ್ಲಿ ಒಮುಂಗ್ ಯಶಸ್ವಿಯಾಗಿದ್ದರು. ಆದರೆ, ಸರಬ್ಜಿತ್ ಚಿತ್ರ ನಿರೀಕ್ಷೆಯನ್ನು ತಲುಪಲಿಲ್ಲ. ಹಣ ಮಾಡುವುದರಲ್ಲೂ ಅದು ವಿಫಲವಾಯಿತು. ಬಹುಶಃ ಐಶ್ವರ್ಯ ರೈಯವರ ಪೇಲವ ಅಭಿನಯವೂ ಚಿತ್ರ ಸೋಲುವುದಕ್ಕೆ ಇನ್ನೊಂದು ಕಾರಣವಾಗಿರಬಹುದು.

 ಅದೇನೇ ಇರಲಿ. ಒಮುಂಗ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈವರೆಗೆ ಆತ್ಮಕಥೆಯ ಮೊರೆಹೋಗಿದ್ದವರು, ಈಗ ಥ್ರಿಲ್ಲರ್ ಕಥೆಯ ಕಡೆಗೆ ಹೊರಳಿದ್ದಾರೆ. ಅವರ ಮುಂದಿನ ಬಹು ನಿರೀಕ್ಷೆಯ ಚಿತ್ರ ‘ಫೈವ್’. ಇದೊಂದು ಥ್ರಿಲ್ಲರ್ ಕಥೆ ವಸ್ತುವನ್ನು ಹೊಂದಿರುವ ಚಿತ್ರ ಎಂದು ಅವರು ಹೇಳುತ್ತಾರೆ. ಚಿತ್ರದ ನಾಯಕನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯೂ ಈಗಾಗಲೇ ಹೊರ ಬಿದ್ದಿದೆ. ‘‘ಫೈವ್ ಚಿತ್ರದ ಕತೆ ಹಲವು ವರ್ಷಗಳ ಹಿಂದೆಯೇ ನನ್ನ ತಲೆಯೊಳಗೆ ರೂಪು ಪಡೆಯುತ್ತಿತ್ತು. ಇದೀಗ ಅಧಿಕೃತವಾಗಿ ಸಿನೆಮಾ ರೂಪದಲ್ಲಿ ಹೊರಬರುತ್ತಿದೆ. ಎಲ್ಲ ರೀತಿಯಲ್ಲೂ ಈ ಚಿತ್ರ ನನಗೆ ವಿಶಿಷ್ಟವಾದುದು’’ ಎನ್ನುತ್ತಾರೆ ಒಮುಂಗ್. ಸಂಗೀತ, ಕಥೆ, ಸೆಟ್ಟಿಂಗ್ ಎಲ್ಲದರಲ್ಲೂ ಚಿತ್ರ ವಿಭಿನ್ನವಾಗಿರಲಿದೆ ಎನ್ನುವುದು ಚಿತ್ರ ಬಳಗದ ಅಭಿಪ್ರಾಯ. ಉತ್ಕರ್ಷಿಣಿ ವಶಿಷ್ಠ ಅವರ ಚಿತ್ರಕಥೆ, ಮಿಥುನ್, ಜೀತ್ ಗಂಗೂಲಿ, ಅಮಾಲ್ ಮಲಿಕ್ ಅವರ ಸಂಗೀತ, ರವಿವರ್ಮನ್ ಛಾಯಾಗ್ರಹಣ ಚಿತ್ರದ ಹೆಗ್ಗಳಿಕೆಯಂತೆ. ಸರಬ್ಜಿತ್‌ನಲ್ಲಿ ಕಳೆದುಕೊಂಡದ್ದನ್ನು ಒಮುಂಗ್ ಅವರು ಐದರಲ್ಲಿ ಪಡೆದುಕೊಳ್ಳುತ್ತಾರೆಯೋ ಎನ್ನುವುದನ್ನು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News