ಬಾಲಕಿಗೆ ಕಿರುಕುಳ, ಪ್ರತಿಭಟಿಸಿದವರ ಮೇಲೆ ಗುಂಡಿನ ದಾಳಿಗೆ ಮೂವರು ಬಲಿ
ಬಿಜ್ನೋರ್, ಸೆ.17: ಬಾಲಕಿಗೆ ಕಿರುಕುಳ ನೀಡಿದ್ದನ್ನು ವಿರೋಧಿಸಿ ಪ್ರತಿಭಟಿಸಿದ ಆಕೆಯ ಮನೆಯವರ ವಿರುದ್ಧ ದುಷ್ಕರ್ಮಿಗಳು ಶುಕ್ರವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಕನಿಷ್ಠ 17 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನ ಪೇಡಾ ಗ್ರಾಮದಿಂದ ವರದಿಯಾಗಿದೆ. ಈ ಘಟನೆಯ ಸಂಬಂಧ ಪೊಲೀಸರು ಜಾಟ್ ಸಮುದಾಯಕ್ಕೆ ಸೇರಿರುವ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರೂ ಎಫ್‌ಐಆರ್ ಇನ್ನಷ್ಟೇ ದಾಖಲಾಗಬೇಕಿದೆ.
ಶುಕ್ರವಾರ ಬೆಳಿಗ್ಗೆ ಸಂತ್ರಸ್ತೆ ಒಂಬತ್ತನೆ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿ ತನ್ನ ಸಹೋದರನೊಂದಿಗೆ ಶಾಲೆಗೆ ತೆರಳುತ್ತಿದ್ದಾಗ ಆಕೆಯ ಮನೆಯಿಂದ ಅನತಿ ದೂರದಲ್ಲೇ ಜಾಟ್ ಸಮುದಾಯಕ್ಕೆ ಸೇರಿದವರೆನ್ನಲಾದ ಐದಾರು ಯುವಕರಿದ್ದ ತಂಡವು ಆಕೆಗೆ ಕಿರುಕುಳ ನೀಡಿತ್ತೆನ್ನಲಾಗಿದೆ. ಇದನ್ನು ಬಾಲಕಿಯ ಸಹೋದರ ತಾಲಿಬ್ ವಿರೋಧಿಸಿದ್ದು, ಪರಿಸ್ಥಿತಿ ನಂತರ ಗ್ರಾಮದ ಹಿರಿಯರ ಮುಂದಾಳತ್ವದಲ್ಲಿ ತಿಳಿಗೊಂಡಿತ್ತು.
ಆದರೆ ತನ್ನ ಸಹೋದರಿಯನ್ನು ಶಾಲೆಗೆ ಬಿಟ್ಟು ತಾಲಿಬ್ ಹಿಂದೆ ಬರುವಷ್ಟರಲ್ಲಿ ಆತನ ಮಾವ ಅಸ್ಲಂ ಕೆಲ ಯುವಕರೊಂದಿಗೆ ವಾಗ್ವಾದ ಮಾಡುತ್ತಿದ್ದರು. ತಾಲಿಬ್ ಮಧ್ಯ ಪ್ರವೇಶಿಸುತ್ತಿದ್ದಂತೆಯೇ ಆತನ ಮೇಲೆ ಹಲ್ಲೆ ನಡೆಸಲಾಯಿತಾದರೂ ಸ್ಥಳೀಯರು ತಾಲಿಬ್ ಹಾಗೂ ಅಸ್ಲಂರನ್ನು ರಕ್ಷಿಸಿದ್ದರೆನ್ನಲಾಗಿದೆ.
ಬಾಲಕಿಗೆ ಕಿರುಕುಳ ನೀಡಿದ್ದ ಯುವಕರು ನಂತರ ಇನ್ನೂ ಹಲವರನ್ನು ಕರೆದುಕೊಂಡು ಬಂದು ದಾಳಿ ನಡೆಸುವುದಾಗಿ ಬೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದರೆಂದು ಹೇಳಲಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರು ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಇತ್ತ ಮನೆಯವರು ತಾಲಿಬ್‌ನ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಸುಮಾರು 20 ಮಂದಿಯ ತಂಡ ಮನೆಯತ್ತ ಗುಂಡಿನ ಮಳೆಗರೆಯರಲಾರಂಭಿಸಿತ್ತು. ಆ ಮನೆಯಲ್ಲಿ ಆರು ಮಂದಿ ಸಹೋದರರ ಕುಟುಂಬಗಳು ವಾಸಿಸುತ್ತಿದ್ದು ಎಲಾ ್ಲಪುರುಷರ ಮೇಲೂ ಗುಂಡಿನ ದಾಳಿ ನಡೆಸಲಾಯಿತು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಯಿತೆಂದು ಆರೋಪಿಸಲಾಗಿದೆ. ಸುಮಾರು ಒಂದು ಗಂಟೆ ಮನೆಯತ್ತ ಗುಂಡಿನ ಮಳೆಗರೆದ ದುಷ್ಕರ್ಮಿಗಳು ನಂತರ ಮನೆಯೊಳಗೆ ಬಂದು ಹೆಂಗಸರನ್ನು ಬೆದರಿಸಿದರೆನ್ನಲಾಗಿದೆ.
ಗುಂಡಿನ ದಾಳಿಯಲ್ಲಿ ಅನಿಸ್, ಸರ್ಫರಾಝ್ ಹಾಗೂ ಎಹ್ಸಾನ್ ಸಾವಿಗೀಡಾದರೆ, ರಿಝ್ವಾನ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಇತರ 12 ಮಂದಿ ಮಹಿಳೆಯರು ಹಾಗೂ ಮಕ್ಕಳನ್ನು ಮೀರತ್ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.