ಗಣೇಶ ವಿಸರ್ಜನೆಯ ವೇಳೆ ಮಸೀದಿಯ ಬಳಿ ಕಲ್ಲು ತೂರಾಟ: ಮಹಾರಾಷ್ಟ್ರದಲ್ಲಿ ಕೋಮು ಉದ್ವಿಗ್ನತೆ

Update: 2016-09-17 15:14 GMT

ಉಮರ್ಖೇಡ್(ಮಹಾರಾಷ್ಟ್ರ), ಸೆ.17: ಗಣೇಶ ವಿರ್ಸಜನೆಯ ವೇಳೆ ಮುರ್ಕಝ್ ಮಸೀದಿಯ ಬಳಿ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ ನಡೆದ ಬಳಿಕ ಯಾವತ್ಮಲ್ ಜಿಲ್ಲೆಯ ಉಮರ್ಖೇಡ್ ಪಟ್ಟಣದಲ್ಲಿ ಕೋಮು ಉದ್ಮಿಗ್ನತೆ ಸೃಷ್ಟಿಯಾಗಿದೆ.

ಘಟನೆಯಲ್ಲಿ 12 ಮಂದಿ ಪೊಲೀಸರು ಸಹಿತ ಸುಮಾರು 35 ಮಂದಿ ಗಾಯಗೊಂಡಿದ್ದು, 29 ಮಂದಿಯನ್ನು ವಶಕ್ಕೆ ಪಡೆಯಲಾಗಿದೆಯೆಂದು ವರದಿಗಳು ತಿಳಿಸಿವೆ.

ಪೊಲೀಸರು ಕೇವಲ ಅಲ್ಪಸಂಖ್ಯಾತ ಸಮುದಾಯದವರನ್ನಷ್ಟೇ ಬಂಧಿಸಿದ್ದು, ಅವರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆಂದು ಅಲ್ಪಸಂಖ್ಯಾತ ಸಮುದಾಯ ಆರೋಪಿಸಿದೆ.

ಗುರುವಾರ ಸಂಜೆ 5ರ ವೇಳೆ ಮುಸ್ಲಿಮರು ಮರ್ಕಝ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ, ಗಣೇಶನ ಭಕ್ತರು ಮೆರವಣಿಗೆ ನಡೆಸುತ್ತಿದ್ದರು. ಅವರು ಭಾರೀ ಶಬ್ದದ ಡಿಜೆ ಹಾಕಿದ್ದರು. ಡಿಜೆಯನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಅದಕ್ಕೆ ಕಿವಿಗೊಡದೆ ಗಣೇಶ ಭಕ್ತರು ಮಸೀದಿ ಗಲ್ಲಿಯ ಮೂಲಕ ಹಾದು ಹೋಗುತ್ತಿದ್ದರು. ಅದು, ಉಭಯ ಸಮುದಾಯಗಳ ನಡುವೆ ಕಲ್ಲು ತೂರಾಟಕ್ಕೆ ನಾಂದಿಯಾಯಿತೆಂದು ಟು ಸರ್ಕಲ್.ನೆಟ್‌ಗೆ ಮೂಲಗಳು ತಿಳಿಸಿವೆ.

ಕಲ್ಲು ತೂರಾಟದಿಂದ ಮಸೀದಿಯ ಕಿಟಕಿಗಳು ಹಾಗೂ ಪ್ರವೇಶದ್ವಾರಗಳಿಗೆ ಹಾನಿಯಾಗಿದೆ. ಸುಮಾರು 25 ಮಂದಿ ಮುಸ್ಲಿಮರೂ ಗಾಯಗೊಂಡಿದ್ದಾರೆಂದು ಅಜ್ಞಾತವಾಗುಳಿಯ ಬಯಸಿರುವ ಮೂಲಗಳು ಹೇಳಿದೆ.

ಸೂಕ್ಷ್ಮತೆಯನ್ನು ಮನಗಂಡಿದ್ದ ಪೊಲೀಸರು, ಗಣೇಶ ಮಂಡಲಗಳು ಸಾಗಬೇಕಾದ ದಾರಿಗಳನ್ನು ಈಗಾಗಲೇ ನಿರ್ಧರಿಸಿದ್ದರು. ಆದಗ್ಯೂ, ತಾಂಬೋಲಿಪುರದ ಗಣೇಶ ಮಂಡಲವು ಮರ್ಕಝ್ ಮಸೀದಿಯಿರುವ ತಪ್ಪು ದಾರಿಯಲ್ಲಿ ಮೆರವಣಿಗೆ ಸಾಗಿತ್ತು. ಇದರಿಂದಾಗಿ ಪಟ್ಟಣದಲ್ಲಿ ಕೋಮು ಉದ್ವಿಗ್ನತೆ ಸ್ಫೋಟಿಸಿದೆಯೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರು ತಾಸಿನೊಳಗೆ ಕಲ್ಲು ತೂರಾಟವನ್ನು ನಿಯಂತ್ರಿಸಿದರಾದರೂ, ಉದ್ರಿಕ್ತ ಗುಂಪು, ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ 4 ಅಂಗಡಿ ಹಾಗೂ 6 ವಾಹನಗಳಿಗೆ ಬೆಂಕಿ ಹಚ್ಚಿದೆ.

ಪ್ರತಿಭಟನಾರ್ಥವಾಗಿ, ಎಲ್ಲ ಗಣೇಶ ಮಂಡಲಗಳು ವಿಗ್ರಹ ವಿಸರ್ಜನೆ ನಿಲ್ಲಿಸಿ, ಕಲ್ಲು ತೂರಾಟ ನಡೆಸಿದ ಅಲ್ಪಸಂಖ್ಯಾತರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಗಣೇಶ ವಿಸರ್ಜನೆ ಮಾಡುವುದಿಲ್ಲವೆಂದು ಪಟ್ಟು ಹಿಡಿದವು. ಉಮರ್ಖೇಡದ ಬಿಜೆಪಿ ಶಾಸಕ ರಾಜೇಂದ್ರ ನಜರ್ಧಾನೆ ಸಹ ಇದೇ ಬೇಡಿಕೆ ಮುಂದಿಟ್ಟ ಬಳಿಕ, ಪೊಲೀಸರು ಅಲ್ಪಸಂಖ್ಯಾತ ಸಮುದಾಯದವರನ್ನು ಸುತ್ತುವರಿಯಲಾರಂಭಿಸಿದರು.

ಪೊಲೀಸರು 29 ಮಂದಿಯನ್ನು ವಶಪಡಿಸಿಕೊಂಡ ಬಳಿಕವಷ್ಟೇ ಶುಕ್ರವಾರ ಗಣೇಶ ಮಂಡಲಗಳು ವಿಗ್ರಹ ವಿಸರ್ಜನೆ ಮಾಡಿದವು. ಶಾಸಕರ ಒತ್ತಡ ಹಾಗೂ ಗಣೇಶ ಮಂಡಲಗಳನ್ನು ಸಮಾಧಾನಪಡಿಸಲು ಪೊಲೀಸರು ಯುವಕರನ್ನು ಯದ್ವಾ ತದ್ವಾ ವಶಪಡಿಸಿಕೊಂಡಿದ್ದಾರೆ. ಆದರೆ, ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚುವಿಕೆಯಿಂದ ತಮ್ಮ ಸಮುದಾಯಕ್ಕೇ ಹೆಚ್ಚು ನಷ್ಟವಾಗಿದೆಯೆಂದು ಅಲ್ಪಸಂಖ್ಯಾತರು ಆರೋಪಿಸಿದ್ದಾರೆ.

ಪೊಲೀಸರು ನಸುಕಿನ 3ರ ವೇಳೆ ಬಾಗಿಲು ಬಡಿದುಕೊಂಡು ಬಂದರು ಹಾಗೂ ತನ್ನ ಮಗನನ್ನು ಕೊಂಡೊಯ್ದರು. ಆತ ಯಾವುದೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಒಳಗೊಂಡಿರಲಿಲ್ಲ. ಆದರೆ, ಯಾರೋ ದ್ವೇಷದಿಂದ ಆತನ ಹೆಸರನ್ನು ಪೊಲೀಸರಿಗೆ ನೀಡಿರುವಂತೆ ತೋರುತ್ತದೆಂದು ಪೊಲೀಸರು ವಶಪಡಿಸಿಕೊಂಡ ಯುವಕನೊಬ್ಬನ ತಾಯಿ ಹೇಳಿದ್ದಾರೆ.

ಅಲ್ಪಸಂಖ್ಯಾತ ಯುವಕರನ್ನು ಯದ್ವಾ ತದ್ವಾ ವಶಪಡಿಸಿಕೊಂಡಿರುವ ಸುದ್ದಿ, ಜಮೀಯತ್ ಉಲೆಮಾ ಹಿಂದ್ (ಮಹಾರಾಷ್ಟ್ರ) ಕಾರ್ಯದರ್ಶಿ ವೌಲಾನಾ ನದೀಂ ಸಿದ್ದೀಕ್‌ರಿಗೆ ತಲುಪಿದ ಬಳಿಕ, ಅವರು ನಾಂದೇಡ್‌ನ ಎಸ್ಪಿ ಹಾಗೂ ಅಮರಾವತಿಯ ಐಜಿಗೆ ಕರೆ ಮಾಡಿ, ನ್ಯಾಯಬದ್ಧ ತನಿಖೆ ನಡೆಸುವಂತೆ ಹಾಗೂ ಅಮಾಯಕರಿಗೆ ಕಿರುಕುಳ ನೀಡದಂತೆ ಮನವಿ ಮಾಡಿದ್ದಾರೆ.

ಕಲ್ಲು ತೂರಾಟದಲ್ಲಿ ಭಾಗವಹಿಸದ ಅಮಾಯಕ ಯುವಕರನ್ನು ಬಿಡುಗಡೆ ಮಾಡಲಾಗುವುದೆಂದು ಎಸ್ಪಿ ಅಖಿಲೇಶ್ ಕುಮಾರ್ ತನಗೆ ಭರವಸೆ ನೀಡಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದಂತೆ ಹಾಗೂ ಇತರ ಸಮುದಾಯದ ಕಿಡಿಗೇಡಿಗಳನ್ನೂ ಬಂಧಿಸುವಂತೆ ತಾನವರನ್ನು ವಿನಂತಿಸಿದೆನೆಂದು ಸಿದ್ದೀಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News