ಅದೇ ತರ ಇದೂ ಕೂಡ....!

Update: 2016-09-17 18:58 GMT

‘‘ಸೆಪ್ಟಂಬರ್ 20ರ ಬಳಿಕ ಸರಕಾರ ಉರುಳಿದರೂ ನೀರು ಬಿಡುವುದಿಲ್ಲ’’ ಎಂದು ಸಿದ್ದರಾಮಯ್ಯ ಘೋಷಿಸಿದ್ದೇ ತಡ, ಬಿಜೆಪಿಯ ಕಚೇರಿಯಲ್ಲಿ ಗರಿ ಗರಿ ಬಟ್ಟೆ ಹಾಕಿಕೊಂಡು ನಾಯಕರು ಆಗಮಿಸ ತೊಡಗಿದರು. ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣನ ಪೇಟವನ್ನು ತಲೆಯಲ್ಲೂ ಖಡ್ಗವನ್ನು ಸೊಂಟದಲ್ಲೂ ಸಿಲುಕಿಸಿ ಬಂದಿದ್ದರು. ಆದರೆ ಯಡಿಯೂರಪ್ಪ ಅವರು ಮಾತ್ರ ‘‘ಅವ್ಟ್ಠ ಖಡ್ಗವನ್ನು ಹೊರಗಿಟ್ಟು ಬರದೇ ಇದ್ದರೆ, ನಾನು ಕಚೇರಿ ಪ್ರವೇಶಿಸುವುದಿಲ್ಲ’’ ಎಂದು ಹಟ ಹಿಡಿದರು.
‘‘ನನಗೆ ಜೀವಕ್ಕೆ ಅಪಾಯವಿದೆ. ಆದುದರಿಂದ ಖಡ್ಗದ ಜೊತೆಗೇ ಕಚೇರಿ ಪ್ರವೇಶಿಸುತ್ತೇನೆ’’ ಈಶ್ವರಪ್ಪ ಸಂಗೊಳ್ಳಿ ರಾಯಣ್ಣನಂತೆ ಅಬ್ಬರಿಸಲು ಯತ್ನಿಸಿದರು.
‘‘ನೋಡ್ರಿ...ಸುಮ್ಮನೆ ನೀವು ಸಂಗೊಳ್ಳಿ ರಾಯಣ್ಣನಂತೆ ಅಬ್ಬರಿಸುವ ಪ್ರಯತ್ನ ಮಾಡಬೇಡಿ...ನಿಮ್ಮ ಧ್ವನಿ ಕಿತ್ತೂರು ಚೆನ್ನಮ್ಮನಿಗೆ ವಂಚಿಸಿದ ಮಲ್ಲಪ್ಪ ಶೆಟ್ಟಿಯನ್ನು ಹೋಲುತ್ತದೆ. ಇದು ನಾಡಿನ ಎಲ್ಲ ಜನರಿಗೂ ಚೆನ್ನಾಗಿ ಗೊತ್ತು...’’ ಯಡಿಯೂರಪ್ಪ ಹೇಳಿದರು.

‘‘ಹೌದ್ರಿ...ನಾನು ಕಿತ್ತೂರು ಚೆನ್ನಮ್ಮನಿಗೆ ಸಂಗೊಳ್ಳಿರಾಯಣ್ಣ ಆದ್ರೆ...ನಿಮ್ಮ ಪಾಲಿಗೆ ಮಲ್ಲಪ್ಪ ಶೆಟ್ಟಿಯೇ ಹೌದು...ಆದರೆ ಈ ಖಡ್ಗವನ್ನು ಹೊರಗೆ ಬಿಟ್ಟು ಬರಲು ಸಾಧ್ಯವೇ ಇಲ್ಲ...’’ ಈಶ್ವರಪ್ಪ ಅವರು ಹಟ ಹಿಡಿದರು. ‘‘ಖಡ್ಗ ಹಿಡ್ಕೊಂಡು ಬರ್ಲಿಕ್ಕೆ ಇಲ್ಲಿ ಏನು ಯುದ್ಧ ನಡೆಯುತ್ತಿದೆಯೇನ್ರಿ..?’’ ಯಡಿಯೂರಪ್ಪ ಕೇಳಿದರು.
‘‘ಈ ಖಡ್ಗ ಸಂಗೊಳ್ಳಿ ರಾಯಣ್ಣ ಗಲ್ಲಿಗೇರುವ ಮುನ್ನ ನನಗೆ ಕೊಟ್ಟಿರುವುದು’’ ಈಶ್ವರ ಖಡ್ಗದ ಮಹತ್ವ ಹೇಳಿದರು.
‘‘ಅಲ್ರೀ...ಅವನು ಗಲ್ಲಿಗೇರುವಾಗ ನೀವು ಹುಟ್ಟೇ ಇಲ್ವಲ್ರೀ...’’ ಶೋಭಾಕರಂದ್ಲಾಜೆ ಗಾಯಕ್ಕೆ ಉಪ್ಪು ಸುರಿದರು.
‘‘ಇದು ನನ್ನ ತಾತನ ತಾತಂಗೆ ಕೊಟ್ಟಿರುವುದು. ಭವಿಷ್ಯದಲ್ಲಿ ನಿಮ್ಮ ಮರಿ ಮಗಂಗೆ ಆವಶ್ಯಕತೆ ಬೀಳತ್ತೆ. ಜಾಗೃತೆಯಾಗಿ ಇಟ್ಟುಕೊಳ್ಳಿ ಎಂದು ರಾಯಣ್ಣ ಹೇಳಿದ್ದರು. ಆದುದರಿಂದ ಇದರ ಭದ್ರತೆ ನನ್ನ ಆದ್ಯತೆ’’ ಈಶ್ವರಪ್ಪ ಹೇಳಿದರು.
ಅಷ್ಟರಲ್ಲಿ ‘‘ನಿಮ್ಮ ನಾಲಗೆಯೇ ನಿಮ್ಮ ಖಡ್ಗ. ಯಡಿಯೂರಪ್ಪರಿಗೆ ಅದು ಧಾರಾಳ ಸಾಕು. ಇದನ್ನು ನಾನು ಇಲ್ಲಿ ಹಿಡ್ಕೊಂಡಿರ್ತೇನೆ...’’ ಎಂದು ಸೋಮಣ್ಣ ಅವರು ಈಶ್ವರಪ್ಪ ಅವರನ್ನು ಸಮಾಧಾನಿಸಿದ ಬಳಿಕ, ಬರೇ ಪೇಟದ ಜತೆಗೆ ಬಿಜೆಪಿ ಕಚೇರಿ ಪ್ರವೇಶಿಸಿದರು.

‘‘ಸಿದ್ದರಾಮಯ್ಯ ನೀರು ಬಿಡುವುದಿಲ್ಲ ಎಂದಿರುವುದರಿಂದ ಸೆಪ್ಟಂಬರ್ 20ಕ್ಕೆ ಸರಕಾರ ಉರುಳುತ್ತೆ. 23ಕ್ಕೆ ನಮ್ಮ ಸರಕಾರ ನನ್ನ ನೇತೃತ್ವದಲ್ಲಿ ಪ್ರಮಾಣ ವಚನ ಮಾಡುತ್ತೆ’’ ಯಡಿಯೂರಪ್ಪ ಹೇಳುತ್ತಿದ್ದಂತೆಯೇ ಕಚೇರಿಯೊಳಗೆ ಗದ್ದಲ ಆರಂಭವಾಯಿತು. ‘‘ರೀ ಯಡಿಯೂರಪ್ಪ ಅವರೇ, ಸುಮ್ಮನೆ ಕನಸು ಕಾಣಬೇಡಿ...ಅದು ಹೇಗೆ ನಿಮ್ಮ ನೇತೃತ್ವದಲ್ಲಿ ಪ್ರಮಾಣ ವಚನ....ಸಂಗೊಳ್ಳಿ ರಾಯಣ್ಣ ಇಲ್ಲಿ ಜೀವಂತ ಇದ್ದಾನೆ...’’ ಈಶ್ವರಪ್ಪ ಅರಚಿದರು.
ಇದೀಗ ಅನಂತಕುಮಾರ್‌ಗೆ ಇರಿಸು ಮುರಿಸಾಯಿತು ‘‘ನೋಡ್ರಿ...ನೀವು ಸಂಗೊಳ್ಳಿ ರಾಯಣ್ಣನನ್ನು ಹಿಡ್ಕೊಂಡ್ರೆ ನಮಗೂ ಜನ ಇದ್ದಾರೆ. ಮೈಸೂರಿನ ದಿವಾನ ಪೂರ್ಣಯ್ಯ ಬ್ರಿಗೇಟ್ ನಮ್ಮ ಜೊತೆಗೂ ಇದೆ....ಅಡ್ವಾಣಿಯವರ ಜೀವನದ ಬಹುದೊಡ್ಡ ಕನಸು ನಾನು ಮುಖ್ಯಮಂತ್ರಿಯಾಗೋದು. ಆ ಕನಸನ್ನು ನನಸು ಮಾಡೋದು ಇಡೀ ರಾಜ್ಯ ಬಿಜೆಪಿಯ ಕರ್ತವ್ಯ...’’ ಭಾವುಕರಾಗಿ ನುಡಿದರು.
‘‘ಅಡ್ವಾಣಿಯವರು ಐಸಿಯುನಲ್ಲಿದ್ದಾರೆ...ಅವರು ಕನಸು ಕಾಣುವುದೆಲ್ಲಿ ಬಂತು...’’ ಶೆಟ್ಟರ್ ಕಡೆಯವರು ಹೇಳಿದರು.
‘‘ಅದು ವಾಜಪೇಯಿ ಕಣ್ರೀ...’’ ಇನ್ಯಾರೋ ತಿದ್ದಿದರು.
‘‘ಅಧಿಕಾರ ಇಲ್ಲದ ಮೇಲೆ ನಾಯಕರು ಐಸಿಯುವಿನಲ್ಲಿ ಇದ್ದಂತೆಯೇ...’’ ಯಡಿಯೂರಪ್ಪ ಹೇಳಿದರು ‘‘ನೋಡ್ರೀ...ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದಾಗ, ಮುಂದಿನ ಮುಖ್ಯಮಂತ್ರಿ ನೀವೇ ಎಂದು ಅಮಿತ್ ಶಾ ಹೇಳಿದ್ದಾರೆ...’’

‘‘ಅಧಿಕಾರಕ್ಕೆ ಬರುವ ಮೊದಲು ಅಚ್ಚೇ ದಿನ್ ಬರುತ್ತೆ ಎಂದು ಮೋದಿ ಹೇಳಿದ್ದರು. ಈಗ ಅಚ್ಛೇ ದಿನ್ ಬಂತಾ? ಅದೇ ತರ ಇದೂ ಕೂಡ....’’ ಅಶೋಕ್ ಕಡೆಯವರು ಹೇಳಿದರು. ಅಷ್ಟರಲ್ಲಿ ಗದ್ದಲ ಜೋರಾಯಿತು.
ಈಗ ಈಶ್ವರಪ್ಪ ಮಧ್ಯೆ ಪ್ರವೇಶಿಸಿದರು ‘‘ನೋಡ್ರಿ ಯಡಿಯೂರಪ್ಪ ಅವರೇ, ಮುಂದಿನ ಚುನಾವಣೆಯಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟಿಸಿ ಗೆಲ್ಲಿಸಿದರೆ ನೀವು ಮುಖ್ಯಮಂತ್ರಿ ಎಂದು ಅಮಿತ್ ಶಾ ಅವರು ಹೇಳಿರುವುದು. ಆದರೆ ಈಗ ಚುನಾವಣೆ ಏನೂ ನಡೆದಿಲ್ಲ, ನಿಮ್ಮ ಪ್ರಯತ್ನವೂ ಇಲ್ಲ. ಎಲ್ಲ ಪಕ್ಕದ ತಮಿಳುನಾಡಿನ ಜಯಲಲಿತಾ ಅವರ ಕೃಪೆಯಿಂದ ನಮಗೆ ಅಧಿಕಾರ ಸಿಕ್ಕಿರುವುದು. ಆದುದರಿಂದ ಸಂಗೊಳ್ಳಿ ರಾಯಣ್ಣನ ವಂಶಜನಾಗಿರುವ ನಾನೇ ಮುಖ್ಯಮಂತ್ರಿಯಾಗುವುದು ನಿಮಗೂ ಹಿರಿಮೆ...’’
ಯಡಿಯೂರಪ್ಪ ಒಮ್ಮೆಲೆ ಆಕ್ರೋಶಗೊಂಡರು ‘‘ಅಚ್ಛೇ ದಿನ್ ಆಸೆ ಹುಟ್ಟಿಸಿ ಮೋಸ ಹೋಗಲು ನಾನೇನು ಮತದಾರ ಅಲ್ಲ. ರಾಜಕೀಯ ನನಗೂ ಗೊತ್ತು. ನೀವು ಸಂಗೊಳ್ಳಿ ರಾಯಣ್ಣನ ವಂಶಜ ಆದ್ರೆ ನಾನು ಕಿತ್ತೂರು ರಾಣಿ ಚೆನ್ನಮ್ಮನ ಕಡೆಯೋನು. ಅಂದು ರಾಣಿಗೆ ಬೆಂಗಾವಲಾಗಿದ್ದಂತೆ ನೀವೂ ನನಗೆ ಬೆಂಗಾವಲಾಗಿರಿ...’’
‘‘ಕಿತ್ತೂರು ಚೆನ್ನಮ್ಮಾಜಿಯ ಕೊನೆಯ ಆಸೆಯೇ ನಾನು ಅಧಿಕಾರಕ್ಕೇರುವುದು. ನೀವು ಅವರಿಗೆ ದ್ರೋಹ ಬಗೆಯುತ್ತಿದ್ದೀರಿ...’’ ಎನ್ನುತ್ತಾ ತನ್ನ ಸೊಂಟದಲ್ಲಿದ್ದ ಖಡ್ಗಕ್ಕಾಗಿ ತಡವರಿಸಿದರು. ಅದು ಹೊರಗೆ ಸೋಮಣ್ಣ ಕೈಯಲ್ಲಿರುವುದು ನೋಡಿ ‘‘ರೀ ಸೋಮಣ್ಣ ಆ ಖಡ್ಗ ತನ್ರೀ ಇಲ್ಲಿ’’ ಎಂದು ಹೇಳಿದರು.
ಅಷ್ಟರಲ್ಲಿ ಸೋಮಣ್ಣ ಆ ಖಡ್ಗವನ್ನು ಗುಜರಿ ಅಂಗಡಿಯಲ್ಲಿ ಮಾರಿ, ಚಿಲ್ಲರೆ ಝಣ ಝಣ ಮಾಡುತ್ತಾ ಬರುತ್ತಿದ್ದರು.
ಅಷ್ಟರಲ್ಲಿ ಇನ್ನೊಬ್ಬರು ಸಲಹೆ ನೀಡಿದರು ‘‘ನೋಡ್ರಿ...ಸಿದ್ದರಾಮಯ್ಯ ಕೆಳಗಿಳಿಯುತ್ತಿರುವುದು, ನಾವು ಅಧಿಕಾರಕ್ಕೇರುವುದು ಎಲ್ಲದಕ್ಕೂ ಕಾರಣ ಜಯಲಲಿತಾ. ಅವರು ಯಾರನ್ನು ಸೂಚಿಸುತ್ತಾರೆಯೋ ಅವರೇ ಮುಖ್ಯಮಂತ್ರಿಯಾಗಲಿ...’’
‘‘ಏನ್ರೀ...ನಮ್ಮ ನರೇಂದ್ರ ಮೋದಿಯವರಿಗಿಂತ ನಿಮಗೆ ಜಯಲಲಿತಾ ಹೆಚ್ಚಾದರೆ...?’’ ಇನ್ಯಾರೋ ತರಾಟೆಗೆ ತೆಗೆದುಕೊಂಡರು.
‘‘ಈ ಮೋದಿಯವರನ್ನು ನಂಬಿದ್ರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿಡಿ, ಬಿಬಿಎಂಪಿ ಮೇಯರ್ ಆಗೋದು ಕಷ್ಟ...ಅದೇನಿದ್ರೂ ಜಯಲಲಿತಾ ಅವರು ಕಾವೇರಿ ಹೆಸರಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ....ಅವರ ಆದೇಶವನ್ನು ಶಿರಸಾವಹಿಸಿ ಪಾಲಿಸಿ ಕಾವೇರಿಯ ಋಣವನ್ನು ತೀರಿಸಿಕೊಳ್ಳೋಣ...’’
‘‘ಹಾಗಾದಲ್ಲಿ ತಮಿಳುನಾಡಿಗೆ ಜಯಲಲಿತಾ ಅಮ್ಮ ಇದ್ದ ಹಾಗೆ, ಕರ್ನಾಟಕದ ಜಯಲಲಿತಾ ನಾನೇ ಇದ್ದೇನಲ್ಲ...’’ ಬಹುಶಃ ಶೋಭಾ ಕರಂದ್ಲಾಜೆ ಇರಬೇಕು.
‘‘ನಟನೆಯಲ್ಲೇನೋ ನೀವು ಅವರನ್ನು ಮೀರಿಸುತ್ತೀರಿ. ಕುಮಾರಿಯಾಗಿಯೂ ಒಕೆ. ಆದರೆ ಯಡಿಯೂರಪ್ಪ ಯಾಕೆ?’’ ಇನ್ಯಾರದೋ ತಕರಾರು. ಬಹುಶಃ ಸದಾನಂದ ಗೌಡ ಅವರಿರಬೇಕು ಎಂದು ಯಡಿಯೂರಪ್ಪ ಗೊಣಗಿಕೊಂಡರು.

‘‘ನೋಡ್ರಿ... ಮೋದಿಯ ವೌನವೇ ಇಂದು ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬರಲು ಕಾರಣ....ನರೇಂದ್ರ ಮೋದಿಯವರು ಹೇಳಿದವರೇ ಅಧಿಕಾರಕ್ಕೆ ಬರಲಿ...’’ ಪ್ರಲಾಪ ಸಿಂಹನ ಪ್ರಲಾಪದಂತಿತ್ತು. ಅಷ್ಟರಲ್ಲಿ ಟಿವಿಯಲ್ಲಿ ಬ್ರೇಕಿಂಗ್ ಸುದ್ದಿ ಹೊರಟಿತು ‘‘ಸರಕಾರ ಉರುಳುವ ಪ್ರಶ್ನೆಯೇ ಇಲ್ಲ. ಅದೆಷ್ಟು ಕಾವೇರಿ ನೀರು ಹರಿದರೂ ಐದು ವರ್ಷ ಪೂರೈಸಿಯೇ ಪೂರೈಸುತ್ತೇವೆ-ಸಿದ್ದರಾಮಯ್ಯ’’
ಬಿಜೆಪಿ ಕಚೇರಿಯ ಮೂಗಿನ ಮಟ್ಟಕ್ಕೆ ನೀರು ಏರಿದಂತಾಯಿತು. ಯಡಿಯೂರಪ್ಪ ಅರಚಿದರು ‘‘ಏನ್ರೀ ಇದು ಅನ್ಯಾಯ. ಮತ್ತೆ ವಚನಭ್ರಷ್ಟ ಸರಕಾರ...ಎರಡು ನಾಲಗೆಯ ಸರಕಾರ...’’
ಈಶ್ವರಪ್ಪ ಅವರು ಸೋಮಣ್ಣ ಅವರ ಮುಂದೆ ನಿಂತು ‘‘ನನ್ನ ಖಡ್ಗ ಎಲ್ರೀ? ನನ್ನ ಖಡ್ಗ ಎಲ್ರೀ...? ಎಲ್ರೀ ನನ್ನ ಹಿಂದ ಸೇನೆ...ಎಲ್ರೀ...ನನ್ನ ರಥ, ಎಲ್ರೀ ನನ್ನ ಕುದುರೆ...’’ ಎಂದು ಮೈ ಪರಚಿಕೊಳ್ಳತೊಡಗಿದರು.

chelayya@gmail.com

Writer - *ಚೇಳಯ್ಯ

contributor

Editor - *ಚೇಳಯ್ಯ

contributor

Similar News